ಗುಂಡಾಲ್ ಜಲಾಶಯದ ಕಲ್ಲು ಕಟ್ಟೇಶ್ವರ ಸ್ವಾಮಿಗೆ ಪೂಜೆ
ಸಂಜೆವಾಣಿ ವಾರ್ತೆ
ಹನೂರು: ಆ.7:- ಕಾಮಗೆರೆ ಗ್ರಾಮ ಸಮೀಪದ ಗುಂಡಾಲ್ ಜಲಾಶಯದ ಮಧ್ಯದಲ್ಲಿ ನೆಲೆಸಿರುವ ಕಲ್ಲು ಕಟ್ಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿ ಸಾವಿರಾರು ಜನರಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಿ ಪಂಕ್ತಿ ಸೇವೆಯ ಕಾರ್ಯಕ್ರಮ ಭಕ್ತಿ ಪೂರ್ವಕವಾಗಿ ಸಾಂಪ್ರದಾಯಿಕ ಆಚರಣೆಯಂತೆ ಜರಗಿತು.
ಕೊಳ್ಳೆಗಾಲ ತಾಲೂಕಿನ ಕಾಮಗೆರೆ ಗ್ರಾಮದ ಗುಂಡಲ್ ಜಲಾಶಯದ ಮಧ್ಯದಲ್ಲಿ ನೆಲಸಿರುವ ಕಲ್ಲು ಕಟ್ಟೇಶ್ವರ ಸ್ವಾಮಿಗೆ ಕಾಮಗೆರೆ ಗ್ರಾಮದ ಜನರು ಪ್ರತಿ ವರ್ಷದಂತೆ ಈ ವರ್ಷವೂ ಗುಂಡಲ್ ಜಲಾಶಯಕ್ಕೆ ತೆರಳಿ ಕಲ್ಲು ಕಟ್ಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಮಳೆಗಾಗಿ ಪ್ರಾರ್ಥಿಸಿದ್ದಾರೆ.
ಪ್ರತಿ ವರ್ಷದ ವಾಡಿಕೆಯಂತೆ ಕಾಮಗೆರೆ ಗ್ರಾಮದ ವೀರಶೈವರು ಮತ್ತು ಒಕ್ಕಲಿಗರು ದಲಿತರು ಸೇರಿದಂತೆ ವಿವಿಧ ಎಲ್ಲಾ ಸಮುದಾಯದ ಜನರು ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿ ಸಾಂಪ್ರದಾಯಿಕ ಆಚರಣೆಯಂತೆ ಕಲ್ಲುಕಟ್ಟೇಶ್ವರ ಸ್ವಾಮಿಗೆ ಹರಕೆ ಪೂಜೆ ಸಲ್ಲಿಸಿ ಪಂಕ್ತಿ ಸೇವೆಯನ್ನು ಸಲ್ಲಿಸಿದ್ದಾರೆ.
ಗ್ರಾಮದಲ್ಲಿ ಬೆಳಗ್ಗೆ ಟ್ರ್ಯಾಕ್ಟರ್, ಎತ್ತಿನ ಗಾಡಿಗಳ ಮೂಲಕ ಆಹಾರ ಧಾನ್ಯ ಪದಾರ್ಥಗಳು ಸಾಮಗ್ರಿಗಳನ್ನು ಕಟ್ಟಿಕೊಂಡು ಶ್ರೀ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಹಾಗೂ ಪಟ್ಟದ ಮಠದ ಸ್ವಾಮಿಗಳ ಅವರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ತಮಟೆ ವಾದ್ಯ ಮೇಳಗಳೊಂದಿಗೆ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಮೂಲಕ ಗುಂಡಾಲ್ ಜಲಾಶಯಕ್ಕೆ ತೆರಳಿದರು.
ಜಲಾಶಯದ ಮಧ್ಯ ಭಾಗದ ನೀರಿನಿಂದ ಆ ಮೃತವಾಗಿರುವ ಬೃಹತ್ ಮರದಲ್ಲಿ ನೆಲೆಸಿರುವ ಕಲ್ಲು ಕಟ್ಟೆಶ್ವರ ಸ್ವಾಮಿಗೆ ಪೂಜೆ ಸಲ್ಲಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತ ಮಹಾಶಯ ಜನರಿಗೆ ಪಂಕ್ತಿ ಸೇವೆಯಲ್ಲಿ ಸಿಹಿ ಪಾಯಸ , ರಾಗಿ ಮುದ್ದೆ, ಅನ್ನ, ತರಕಾರಿ ಕಾಳುಗಳ ಸಾಂಬಾರ್ ಉಣ ಬಡಿಸಲಾಯಿತು.
ಗುಂಡಾಲ್ ಜಲಾಶಯದಲ್ಲಿ ಹಮ್ಮಿಕೊಂಡಿದ್ದ ಕಲ್ಲುಕಟ್ಟೇಶ್ವರ ಸ್ವಾಮಿಯ ಪೂಜೆಯಲ್ಲಿ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರು ಭಾಗಿಯಾಗಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಮಠಾಧೀಶರು ಹಾಗೂ ಸಾವಿರಾರು ಭಕ್ತ ಸಮೂಹ ಪ್ರಸಾದ ಸ್ವೀಕರಿಸಿದರು.
ನಂತರ ಮಾತನಾಡಿದ ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರು ಗುಂಡಲ್ ಜಲಾಶಯದಲ್ಲಿ ನೆಲೆಸಿರುವ ಕಲ್ಲುಕಟ್ಟೇಶ್ವರ ಸ್ವಾಮಿಗೆ ಪ್ರತಿ ವರ್ಷವೂ ನಮ್ಮ ಗ್ರಾಮದ ಎಲ್ಲಾ ಜನರು ಒಗ್ಗಟ್ಟಿನಿಂದ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸುವುದು ಅನ್ನಸಂತರ್ಪಣೆ ಮಾಡುವುದು ಹಲವಾರು ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ.
ಪ್ರತಿ ವರ್ಷದಂತೆ ಆಗಸ್ಟ್ ತಿಂಗಳಲ್ಲಿ ಪೂಜೆ ಸಲ್ಲಿಸಿದ ನಂತರ ಮಳೆಯಾಗುವ ವಾಡಿಕೆ ನಡೆದುಕೊಂಡು ಬಂದಿದೆ. ಇದರಿಂದ ಜಲಾಶಯ ಭರ್ತಿಯಾಗಿ ಈ ಭಾಗದ ಜನರಿಗೆ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ಈ ಪೂಜಾ ಕಾರ್ಯಕ್ಕೆ ಅರಣ್ಯ ಇಲಾಖೆಯವರು ಸಹಕಾರ ನೀಡಿದ್ದಾರೆ. ಸ್ವಾಮಿಯು ಆಶೀರ್ವಾದದಿಂದ ಕಾಲ ಕಾಲಕ್ಕೆ ಮಳೆಯಾಗಿ ಒಳ್ಳೆಯ ವಾತಾವರಣ ಸೃಷ್ಟಿಯಾಗರಲೆಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಮಗೆರೆ ಮಠಾಧೀಶರು, ಗೌಡ್ರು ಮಲ್ಲಿಕಾರ್ಜುನ ಸ್ವಾಮಿ, ಗೌ ಅಂಬರೀಷ್, ಕುಮಾರ್ ಗೌಡ್ರು, ಮರಿಸ್ವಾಮಿ ಗೌಡ್ರು, ಮಂಜು, ಶಾಂತಣ್ಣ, ಪ್ರಭುಸ್ವಾಮಿ, ರಂಗಶೆಟ್ಟಿ, ನಾಗ, ಪುಟ್ಟಸ್ವಾಮಿ ಶೆಟ್ಟಿ, ಕಾನಿ ರಾಜಪ್ಪ, ಗ್ರಾಮ ಪಂ, ಅಧ್ಯಕ್ಷ ಚಿಕ್ಕಸ್ವಾಮಿ, ಸದಸ್ಯ ಕೆ.ಕುಮಾರ್, ಶಂಕರಣ್ಣ, ಮಂಗಲ ಪ್ರಕಾಶ್, ನಟೇಶ್, ಬಿಂದು ಲೋಕೇಶ್, ಮಾದೇವಸ್ವಾಮಿ, ರವಿಚಂದ್ರ, ಬೇಕರಿ ರವಿ, ಏರ್ಟೆಲ್ ನಾಗೇಂದ್ರ, ಸುರೇಶ್, ಕೆ.ಬಿ ಮಧು, ಕಿರಣ್, ಟೈಲರ್ ಶೇಖರ್, ಗುರು ಸೇರಿದಂತೆ ವಿವಿಧ ಸಮುದಾಯದ ಯಜಮಾನರು ಮುಖಂಡರುಗಳು ಸಾರ್ವಜನಿಕರು ಇದ್ದರು.