ನಿಮ್ಮದು ಪಾದಯಾತ್ರೆಯಲ್ಲ, ಪಾಪ ವಿಮೋಚನಾ ಯಾತ್ರೆ: ಡಿಕೆಶಿ
ಸಂಜೆವಾಣಿ ವಾರ್ತೆ
ಮಂಡ್ಯ: ಆ.07:- ಬೆಲೆ ಏರಿಕೆ ಮತ್ತು ಆರ್ಥಿಕ ಅಸಮಾನತೆ ವಿರುದ್ಧ ರಾಹುಲ್‍ಗಾಂಧಿಯವರು ‘ಭಾರತ್ ಜೋಡೊ’ ಪಾದಯಾತ್ರೆ ಮಾಡಿದರು. ನಾವು ಕಾವೇರಿ ನೀರಿಗಾಗಿ ಮತ್ತು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದೆವು. ಬಿಜೆಪಿ ಮತ್ತು ಜೆಡಿಎಸ್‍ನವರು,ಅವರೇ ಮಾಡಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ವಿಮರ್ಶೆ ಮಾಡಿಕೊಳ್ಳಲು ಪಾದಯಾತ್ರೆ ನಡೆಸುತ್ತಿದ್ದಾರೆ. ನಿಮ್ಮದು ಪಾದಯಾತ್ರೆಯಲ್ಲ, ಪಾಪ ವಿಮೋಚನಾ ಯಾತ್ರೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟುವಾಗಿ ಟೀಕಿಸಿದರು.
ನಗರದ ಮೈಶುಗರ್ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಜನಾಂದೋಲನ ಸಮಾವೇಶ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈತ್ರಿ ಪಕ್ಷಗಳು ಪಾದಯಾತ್ರೆ ಮಾಡುತ್ತಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನನ್ನ ವಿರುದ್ಧ ಅಲ್ಲ. ಕಾಂಗ್ರೆಸ್ ಪಕ್ಷವನ್ನು 136 ಸ್ಥಾನಗಳಲ್ಲಿ ಗೆಲ್ಲಿಸಿದ ಬಡಜನರ ವಿರುದ್ಧ. ಕಾಂಗ್ರೆಸ್ ಸರ್ಕಾರ ಕಿತ್ತೊಗೆಯಲು ಕುಮಾರಣ್ಣ ಮತ್ತು ಯಡಿಯೂರಪ್ಪನವರೇ ನಿಮ್ಮ ಹಣೆಯಲ್ಲೇ ಬರೆದಿಲ್ಲ. ಅಶೋಕ್ ನಿನ್ನ ಕೈಯಲ್ಲಿ ಧಮ್ ಇಲ್ಲ. ನಿಮ್ಮ ಪಾದಯಾತ್ರೆಗೂ ಧಮ್ ಇಲ್ಲ ಎಂದು ಛೇಡಿಸಿದರು.
ವಿಜಯೇಂದ್ರನ ಬಗ್ಗೆ ಬಿಚ್ಚಿ ಹೇಳಲಾ?: ‘ಏಯ್ ವಿಜಯೇಂದ್ರ, ನಾವು ನಾಗರಾಜೇಗೌಡನಿಗೆ ಟಿಕೆಟ್ ಕೊಟ್ಟಿದ್ದರೆ ನೀನು ಅಸೆಂಬ್ಲಿಗೆ ಬರುತ್ತಿರಲಿಲ್ಲ. ನಿಮ್ಮ ತಂದೆ ಏಕೆ ಮೂರು ಬಾರಿ ರಾಜೀನಾಮೆ ಕೊಟ್ಟರು ಅಂತ ತಿಳಿಸು.ದುಬೈಗೆ ವಿಶೇಷ ವಿಮಾನದಲ್ಲಿ ಹೋಗಿ ಅಕೌಂಟ್ ತೆರೆದಲ್ಲ, ನಿನ್ನ ಮೇಲೆ ಯಾಕೆ ಇನ್ನೂ ತನಿಖೆ ನಡೆದಿಲ್ಲ. ನಿನ್ನ ಬಗ್ಗೆ ಬಿಚ್ಚಿ ಹೇಳಲಾ? ಈಗ ಬೇಡ ಅಸೆಂಬ್ಲಿಯಲ್ಲಿ ಮಾತನಾಡುತ್ತೇನೆ. ಎಲ್ಲವೂ ದಾಖಲಾಗಲಿ’ ಎಂದು ಹರಿಹಾಯ್ದರು.
‘ಮುಡಾದಲ್ಲಿ ಪಟ್ಟಿ ಇದೆಯಲ್ಲ ಅದರ ಬಗ್ಗೆ ಮಾತನಾಡು ಕುಮಾರಸ್ವಾಮಿ. ನಿಮ್ಮ ಸಹೋದರರ ಆಸ್ತಿ ಪಟ್ಟಿ ಬಿಚ್ಚಿಡು ಅಂದ್ರೆ ಇನ್ನೂ ಬಿಚ್ಚಿಟ್ಟಿಲ್ಲ. ಮಂಡ್ಯದ ಗಂಡು ಭೂಮಿಯಲ್ಲಿ ಗೆದ್ದಿದ್ದೀಯಾ. ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರ ಕೊಡು’ ಎಂದು ಸವಾಲು ಹಾಕಿದರು.
ಉದ್ಯೋಗ ಕೊಡಿಸಿದರೆ ಒಂದು ಕೋಟಿ ನಮಸ್ಕಾರ ಹೇಳುತ್ತೇನೆ “ಎಸ್.ಎಂ.ಕೃಷ್ಣ ಅವರು ಮದ್ದೂರಿನ ಸೋಮನಹಳ್ಳಿ, ಮಂಡ್ಯದ ತೂಬಿನಕೆರೆಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಸ್ಥಾಪನೆ ಮಾಡಿದರು. ಕುಮಾರಸ್ವಾಮಿ ಅವರೇ ಮೋದಿ ಅವರು ನಿಮ್ಮ ಮೇಲೆ ವಿಶ್ವಾಸವಿಟ್ಟು ಕೈಗಾರಿಕಾ ಮಂತ್ರಿ ಮಾಡಿದ್ದಾರೆ. ಮಂಡ್ಯ ಮತ್ತು ಹಾಸನ ಭಾಗದಲ್ಲಿ 10 ಸಾವಿರ ಉದ್ಯೋಗ ಸೃಷ್ಟಿ ಮಾಡುವ ಕೈಗಾರಿಕೆ ಮಾಡುತ್ತೇನೆ ಎಂದು ಹೇಳಿದ್ದೀರ. ನಮ್ಮ ಜನರಿಗೆ ಉದ್ಯೋಗ ಸಿಗುತ್ತದೆ ಎಂದರೆ ನಾವು ನಿಮಗೆ ಸಹಕಾರ ನೀಡುತ್ತೇವೆ. ನಮ್ಮ ಯುವಕರಿಗೆ ಕೆಲಸ ನೀಡಪ್ಪ ಒಂದು ಕೋಟಿ ನಮಸ್ಕಾರ ಹೇಳುತ್ತೇನೆ” ಎಂದರು.
ಮಂಡ್ಯದ ಜನರ ಬದುಕಿಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ. ಎಸ್.ಎಂ. ಕೃಷ್ಣ ಅವರ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತಾರೆ. ನಿಮಗೆ ಮಂಡ್ಯದ ನಾಯಕರಾದ ಮಾದೇಗೌಡರು ಹಾಗೂ ಕೃಷ್ಣ ಅವರ ಬಗ್ಗೆ ಮಾತನಾಡುವ ಹಕ್ಕಿಲ್ಲ. ರೈತರ ಮಕ್ಕಳ, ಕಾವೇರಿ ತಾಯಿಯ ನಾಡಿನ ರಕ್ಷಣೆಗಾಗಿ ಜನರು ನಮಗೆ 136 ಸ್ಥಾನ ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ150 ಸ್ಥಾನಗಳನ್ನು ಗೆಲ್ಲುತ್ತೇವೆ. ನಿಮ್ಮ ಕುತಂತ್ರ, ಕೇಂದ್ರ ಸರ್ಕಾರದ ಕುತಂತ್ರ ಜನರ ತೀರ್ಪಿನ ಮುಂದೆ ನಡೆಯುವುದಿಲ್ಲ” ಎಂದು ವಾಗ್ದಾಳಿ ನಡೆಸಿದರು.
ಪೆನ್‍ಡ್ರೈವ್ ಹಂಚಿದ್ದು ವಿಜಯೇಂದ್ರ ಚೇಲಾಗಳು: ಹಾಸನದಲ್ಲಿ ಒಂದು ಲಕ್ಷ ಪೆನ್ ಡ್ರೈವ್ ಹಂಚಿದ್ದು ವಿಜಯೇಂದ್ರ ಚೇಲಾಗಳು ಎಂಬ ಆರೋಪವಿದೆ. ನಿಮ್ಮ ಕುಟುಂಬವನ್ನು ಸರ್ವನಾಶ ಮಾಡಲು ಹೊರಟಿರುವ ಜತೆ ಪಾದಯಾತ್ರೆ ಮಾಡುತ್ತಿದ್ದೀರಾ ಕುಮಾರಸ್ವಾಮಿ. ಅವರ ಜೊತೆ ಹೇಗೆ ದೋಸ್ತಿ ಮಾಡಿದ್ದೀರಾ. ಮೈಸೂರಿನ ಮುಡಾದಲ್ಲಿ ಅಕ್ರಮ ನಡೆದಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡದೇ, ಪಾದಯಾತ್ರೆ ಯಾವ ಪುರುಷಾರ್ಥಕ್ಕೆ ಮಾಡುತ್ತೀದ್ದೀರಿ. ಬಿಜೆಪಿ ಹೈಕಮಾಂಡ್ ಮನವೊಲಿಸಲು ಮಾಡುತ್ತೀದ್ದೀರಾ?, ಗವರ್ನರ್ ಕಚೇರಿಯನ್ನು ಬಿಜೆಪಿ ಕಚೇರಿಯನ್ನಾಗಿ ಮಾಡಿ, ರಾಜ್ಯವನ್ನು ಕೇಸರೀಕರಣ ಮಾಡಲು ಹೊರಟಿದ್ದೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಗವರ್ನರ್ ದೆಹಲಿ ಏಜೆಂಟ್: ಕಂದಾಯ ಸಚಿವ ಕೃಷ್ಣ ಭೈರೇಗೌ ಮಾತನಾಡಿ, ‘ಕರ್ನಾಟಕದ ರಾಜ್ಯಪಾಲರು ಸಂವಿಧಾನದ ಮೇಲೆ ಇದ್ದಾರೋ, ಕೆಳಗೆ ಇದ್ದಾರೋ ಗೊತ್ತಾಗುತ್ತಿಲ್ಲ.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಡಿ ಕೆಲಸ ಮಾಡುತ್ತಿಲ್ಲ. ಬಿಜೆಪಿ ಪಿತೂರಿಯಲ್ಲಿ ಗವರ್ನರ್ ಕೂಡ ಸೇರಿಕೊಂಡಿದ್ದಾರೆ. ದೆಹಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಕೋರ್ಟ್‍ನಿಂದ ಛೀಮಾರಿ ಹಾಕಿಸಿಕೊಂಡ ವ್ಯಕ್ತಿಯೊಬ್ಬ ಅರ್ಜಿ ಕೊಟ್ಟಿದ್ದಕ್ಕೆ ಸಿಎಂಗೆ ನೋಟಿಸ್ ಕೊಟ್ಟಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.
‘ದೋಸ್ತಿ ರಾಂಗ್ ಟರ್ನ್’ ವಿಡಿಯೊ ತುಣಕು ಪ್ರಸಾರ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ‘ದೋಸ್ತಿ ರಾಂಗ್ ಟರ್ನ್’ ಹೆಸರಿನಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಪರಸ್ಪರ ಕಚ್ಚಾಟದ ಹಿಂದಿನ ವಿಡಿಯೊಗಳನ್ನು ‘ಜನಾಂದೋಲನ ಸಮಾವೇಶ’ದ ವೇದಿಕೆಯ ಪರದೆಯಲ್ಲಿ ಪ್ರಸಾರ ಮಾಡುವ ಮೂಲಕ ತಿರುಗೇಟು ನೀಡಿದರು.
‘ಅಧಿಕಾರ ದಾಹದಿಂದ ಕುಣಿದು ಕುಪ್ಪಳಿಸುತ್ತಿರುವ ಅಪ್ಪ-ಮಕ್ಕಳ ವಿರುದ್ಧ ನನ್ನ ಹೋರಾಟ’ ಎಂದು ಯಡಿಯೂರಪ್ಪ ಸದನದಲ್ಲಿ ನೀಡಿದ್ದ ಹೇಳಿಕೆ, ‘ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದು ಕುಮಾರಸ್ವಾಮಿ ನೀಡಿದ್ದ ಹೇಳಿಕೆ, ‘ಅಪ್ಪ-ಮಕ್ಕಳು (ಯಡಿಯೂರಪ್ಪ ಮತ್ತು ವಿಜಯೇಂದ್ರ) ನಡೆಸಿರುವ ಹಗರಣಗಳ ಬಗ್ಗೆಯೂ ತನಿಖೆಯಾಗಲಿ’ ಎಂಬ ಯತ್ನಾಳ್ ಹೇಳಿಕೆ, ಅಶ್ವತ್ಥನಾರಾಯಣ್ ಬಗ್ಗೆ ಕುಮಾರಸ್ವಾಮಿ ಮಾಡಿದ ಭ್ರಷ್ಟಾಚಾರ ಆರೋಪ ಮುಂತಾದ ವಿಡಿಯೊ ತುಣುಕುಗಳನ್ನು ವೇದಿಕೆಯಲ್ಲಿದ್ದ ಪರದೆಯಲ್ಲಿ ಪ್ರಸಾರ ಮಾಡಲಾಯಿತು.
ಕುಮಾರಸ್ವಾಮಿ ದ್ವಂದ್ವ ಹೇಳಿಕೆಗಳ ಬಗ್ಗೆ ‘ಯೂ ಟರ್ನ್ ಕುಮಾರಣ್ಣ’ ಹೆಸರಿನಲ್ಲಿ ವಿಡಿಯೊ ತುಣಕು ಪ್ರದರ್ಶನಗೊಂಡವು. ನೆರೆದಿದ್ದ ಜನರು ‘ತಿರುಗೇಟು ಹೀಗೆ ಕೊಡಬೇಕು’ ಎಂದು ಶಿಳ್ಳೆ, ಚಪ್ಪಾಳೆ ಹಾಕಿ, ಹರ್ಷೋದ್ಗಾರ ಮಾಡಿದರು. ಡಿಕೆಶಿ ಹೊಸ ಅಸ್ತ್ರಕ್ಕೆ ವೇದಿಕೆಯಲ್ಲಿದ್ದ ಸಚಿವರು ತಲೆದೂಗಿದರು.