ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಲಿ
ಕೋಲಾರ,ಆ,೭:ಸಂಸತ್ ಅಧಿವೇಷನದಲ್ಲಿ ಪ್ರತಿಪಕ್ಷದ ನಾಯಕರೊಬ್ಬರು ಜಾತಿಗಣತಿ ನಡೆಯಬೇಕು ಎಂದು ಪ್ರಸ್ತಾಪಿಸಿದಾಗ, ಖುದ್ದು ತನ್ನಜಾತಿ ಯಾವುದು ಅಂತಾನೇ ಗೊತ್ತಿಲ್ಲದವನು (ಜಾತಿ)ಗಣತಿಯ ಮಾತನಾಡುತ್ತಾನೆ ಎಂದು ಅವಮಾನಿಸಿರುವುದು, ಇದಕ್ಕೆ ಮೇಜುಕುಟ್ಟಿ ಬೆಂಬಲಿಸಿರುವುದು ಸಭ್ಯಸಮಾಜಕ್ಕೆ ತಲುಪಿಸಿದ ಅತ್ಯಂತ ಕೆಟ್ಟ ಸಂದೇಶವಾಗಿದೆ ಎಂದು ವಕೀಲ ಕೆ.ನರೇಂದ್ರಬಾಬು ಕಟುವಾಗಿ ಟೀಕಿಸಿದ್ದಾರೆ.
ಪ್ರತಿಪಕ್ಷಗಳ ನಾಯಕನಿಗೇ ಜಾತಿ ವಿಷಯವಾಗಿ ತುಂಬಿದ ಸಂಸತ್ ಅಧಿವೇಷನದಲ್ಲಿಯೇ ಇಷ್ಟೊಂದು ವಿಕೃತವಾಗಿ ಅವಮಾನಿಸಿರುವುದು ರಾಷ್ಟ್ರದಲ್ಲಿ ಜೀವಂತವಿರುವ ಜಾತೀಯತೆಗೆ ಹಿಡಿದ ಕನ್ನಿಡಿಯೇ ಆಗಿದೆ. ಪ್ರತಿಪಕ್ಷಗಳ ರಾಷ್ಟ್ರಮಟ್ಟದ ನಾಯಕನಿಗೇ ಇಷ್ಟೊಂದು ವಿಕೃತವಾಗಿ ಜಾತಿಯತೆಯ ಬಿಸಿ ಬಹಿರಂಗವಾಗಿ, ಅದರಲ್ಲಿಯೂ ಅಧಿಕೃತವಾಗಿಯೇ ನಡೆದಿರುವಾಗ, ರಾಷ್ಟ್ರದಲ್ಲಿ ಪ್ರಸಕ್ತ ಅಸ್ಪೃಶ್ಯತಾಚರಣೆ ಇನ್ನೆಷ್ಟು ವಿಕೋಪಕ್ಕೆ ತಲುಪಿರಬಹುದು ಎಂಬ ಆತಂಕ ಭೀತಿಯಾಗಿ ರೂಪುಗೊಳ್ಳುತ್ತಿದೆ.
ಸಂವಿಧಾನದಡಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿರುವ ನರೇಂದ್ರ ಮೋದಿರವರು ಹಾಗೂ ಕೇಂದ್ರ ಸಚಿವರು, ಆಡಳಿತ ಪಕ್ಷದ ಸಂಸದರು ಜಾತ್ಯಾತೀತ ರಾಷ್ಟ್ರವೆಂದು ಸಂವಿಧಾನದತ್ತವಾಗಿ ಘೋಷಿಸಲ್ಪಟ್ಟಿರುವ ಜಾತ್ಯಾತೀತ ಭಾರತ ದೇಶದ ಪ್ರತಿಷ್ಠಿತ ಸಂಸತ್ ಅಧಿವೇಷನದಲ್ಲಿ ಕಳೆದ ಮಂಗಳವಾರದಂದು ಜಾತಿ ವಿಷಯಕ್ಕೆ ಮೇಜುಕುಟ್ಟಿ ಬೆಂಬಲಿಸಿರುವುದು ಸಂವಿಧಾನದ ಧ್ಯೇಯೋದ್ಧೇಶಗಳ ಉಲ್ಲಂಘನೆ ಮಾತ್ರವಲ್ಲದೇ, ವಿವಿಧ ಹಕ್ಕುಗಳ ಉಲ್ಲಂಘನೆ ಕೇಂದ್ರ ಸರ್ಕಾರದಿಂದಲೇ ಆಗುತ್ತಿರುವುದು ಇನ್ನಷ್ಟು ಆತಂಕವನ್ನು ಹೆಚ್ಚಿಸಿದೆ.
ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಇದೇ ಪ್ರಧಾನಿ ನರೇಂದ್ರಮೋದಿ ರವರು ತಾನು ಹಿಂದುಳಿದ ವರ್ಗಕ್ಕೆ ಸೇರಿದವನೆಂದು ತನ್ನನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ಬಹಿರಂಗವಾಗಿ ಹೇಳಿಕೊಂಡಾಗ, ಸ್ವತಂತ್ರ ಭಾರತದ ಸ್ವಾತಂತ್ಯದ ಬಗ್ಗೆ, ರಾಷ್ಟ್ರದ ಪ್ರಧಾನಿಯ ಸ್ವಾತಂತ್ರ್ಯದ ಬಗ್ಗೆ, ಇವರು ನೀಡಿರಬಹುದಾದ ಸ್ವತಂತ್ರ ಆಡಳಿತದ ಬಗ್ಗೆ ಇಡೀ ಪ್ರಪಂಚ ಅನುಮಾನದಿಂದ ನೋಡಿತ್ತು. ಇದೇ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಕಳೆದ ಒಂದು ದಶಕ ಕಾಲ ಇವರು ನೀಡಿರಬಹುದಾದ ಆಡಳಿತದ ಒಂದೊಂದು ನಿರ್ಧಾರದ ಸ್ವಾತಂತ್ಯವನ್ನು, ಇರಬಹುದಾದ ಆಂತರಿಕ-ಬಾಹ್ಯ ಹಸ್ತಕ್ಷೇಪವನ್ನೂ ಪರಿಶೀಲಿಸಬಹುದಿದೆ. ಏಕೆಂದರೆ ಮೇಲ್ಕಂಡ ಹೇಳಿಕೆಯನ್ನು ಒಂದು ದಶಕ ಕಾಲ ರಾಷ್ಟ್ರದ ಆಡಳಿತ ನಡೆಸಿರುವ ಪ್ರಧಾನಿ ನೀಡಿದ ಬಹಿರಂಗ ಆಗಿದೆ.
ಕೇಂದ್ರ ಸರ್ಕಾರದ ಈ ನಡೆಯು ತೀವ್ರ ಆಕ್ಷೇಪಣಾಕಾರಿ ಆಗಿರುವುದರಿಂದ, ಕಾನೂನು ಉಲ್ಲಂಘನೆಯಾಗಿರುವುದರಿಂದ, ಸಂವಿಧಾನದ ಧ್ಯೇಯೋದ್ಧೇಶಗಳಿಗೇ ವ್ಯತಿರಿಕ್ತವಾಗಿರುವುದರಿಂದ, ಈಗಾಗಲೇ ಈ ಮೂಲಕ ಈ ಕೇಂದ್ರ ಸರ್ಕಾರವು ಸಭ್ಯಸಮಾಜಕ್ಕೆ ತುಂಬಾ ಆತಂಕಕಾರಿ ಸಂದೇಶವನ್ನು ರವಾನಿಸಿರುವುದರಿಂದ, ನೈತಿಕವಾಗಿ, ಸಂವಿಧಾನಾತ್ಮಕವಾಗಿ, ಕಾನೂನಾತ್ಮಕವಾಗಿಯೂ ಸಂವಿಧಾನಕ್ಕೆ ಗೌರವಕೊಟ್ಟು ಜಾತಿವಾದಕ್ಕೆ ಮೇಜುಕುಟ್ಟಿ ಬೆಂಬಲಿಸಿದ ಪ್ರಧಾನಿ ನರೇಂದ್ರ ಮೋದಿರವರು ಹಾಗೂ ಕೇಂದ್ರ ಸಚಿವರು, ಆಡಳಿತ ಪಕ್ಷದ ಸಂಸದರು ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.