ಸದಾಶಿವ ಆಯೋಗದ ವರದಿಯಂತೆ ಒಳಮೀಸಲಾತಿ ಜಾರಿಗೆ ಹದನೂರ್ ಒತ್ತಾಯ: ಆ. 21ರ ಬಂದ್‍ಗೆ ವಿರೋಧ
ಕಲಬುರಗಿ:ಆ.6: ಒಳಮೀಸಲಾತಿ ಕುರಿತು ಸರ್ವೋಚ್ಛ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ಹಾಗಾಗಿ ರಾಜ್ಯ ಸರ್ಕಾರವು ಕೂಡಲೇ ರಾಜ್ಯದಲ್ಲಿನ ಎಲ್ಲ ನೇಮಕಾತಿಗಳನ್ನು ಸ್ಥಗಿತಗೊಳಿಸಿ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಮಾದಿಗ ದಂಡೋರಾ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಾಪಣ್ಣಾ ಹದನೂರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸಮಾನತೆಯ ಮೀಸಲಾತಿ ಹಂಚಿಕೆಯಿಂದ ಮಾದಿಗ ಸಮಾಜಕ್ಕೆ ಅನ್ಯಾಯ ಆಗುತ್ತಿದೆ ಎಂದು ನನ್ನ ಅಧ್ಯಕ್ಷತೆಯಲ್ಲಿ ನಾಲ್ಕೈದು ಜನರು ಸೇರಿ 1997ರ ಅಕ್ಟೋಬರ್ 13ರಂದು ಮೀಸಲಾತಿ ವರ್ಗೀಕರಣಕ್ಕಾಗಿ ಹೋರಾಟ ಪ್ರಾರಂಭಿಸಿದ್ದೆವು. ಕಳೆದ 1ರಂದು ಸುಪ್ರಿಂಕೋರ್ಟ್‍ನ ಸಾಂವಿಧಾನಿಕ ಪೀಠವು ಪರಿಶಿಷ್ಟ ಜಾತಿಗಳಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಉಪ ಜಾತಿಗಳಿಗೆ ಮೀಸಲಾತಿ ಕಲ್ಪಿಸಲು ಒಳಮೀಸಲಾತಿ ಕಲ್ಪಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಒದಗಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು.
ಪಂಜಾಬ್‍ನಲ್ಲಿ ಮೊದಲ ಒಳಮೀಸಲಾತಿ ಹೋರಾಟ ಕೇಳಿಬಂತು. ಪರಿಶಿಷ್ಟರೇ ಹೆಚ್ಚಿರುವ ಪಂಜಾಬ್‍ನಲ್ಲಿ ಕಳೆದ 1975ರ ಮೇ 5ರಂದು ಒಳಮೀಸಲಾತಿ ಜಾರಿಗೊಂಡಿತು. ನಂತರ ಹರಿಯಾಣಾದಲ್ಲಿ 1994ರಲ್ಲಿ ಜಾರಿಗೆ ಬಂತು. ನಂತರ 1985ರಲ್ಲಿ ಅಖಂಡ ಆಂಧ್ರಪ್ರದೇಶದಲ್ಲಿ ಮಾಜಿ ಸಂಸದ ಮಂದಾ ಜಗನ್ನಾಥಂ ಮತ್ತು ಮಾಜಿ ಸಚಿವೆ ಶ್ರೀಮತಿ ಟಿ. ಸದಾಲಕ್ಷ್ಮೀ ಹಾಗೂ ಮಾದಿಗ ಸಮಾಜದ ಮುಖಂಡರೊಂದಿಗೆ ಸೇರಿ ಆದಿಜಾಂಭವ ಕಲ್ಯಾಣ ಸಂಘ ಸ್ಥಾಪಿಸಲಾಯಿತು. ರಾಷ್ಟ್ರೀಯ ಅಧ್ಯಕ್ಷರಾಗಿ ರಾಜ್ಯದ ದಿ. ಡಿ. ಮಂಜುನಾಥ್ ಅವರು ನೇಮಕಗೊಂಡರು. ಮೀಸಲಾತಿಯನ್ನು ವರ್ಗೀಕರಿಸಬೇಕೆಂದು ಹೋರಾಟದ ಮೂಲಕ ಸರ್ಕಾರಕ್ಕೆ ಆಗ್ರಹಿಸಲಾಯಿತು ಎಂದು ಅವರು ಹೇಳಿದರು.
ಮೀಸಲಾತಿ ವರ್ಗೀಕರಣ ಜಾರಿಗೊಳಿಸುವ ಕುರಿತು ನ್ಯಾಯಮೂರ್ತಿ ಎ.ಜೆ. ಸದಾಶಿವ್ ಆಯೋಗದ ವರದಿಯನ್ನು ಜಾರಿಗೊಳಿಸುವ ಕುರಿತು ಅಧ್ಯಯನ ನಡೆಸಲು ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರವು 2022ರಲ್ಲಿ ಅಂದಿನ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಅವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸಿತು. ಉಪ ಸಮಿತಿಯ ಶಿಫಾರಸ್ಸಿನಂತೆ ವಿಧಾನಸಭೆಯ ಚುನಾವಣೆಯ ಹೊಸ್ತಿಲಲ್ಲಿ 2023ರ ಮಾರ್ಚ್‍ನಲ್ಲಿ ಕೊನೆಯ ಸಚಿವ ಸಂಪುಟ ಸಭೆಯಲ್ಲಿ ವರ್ಗೀಕರಣ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಶಿಫಾರಸ್ಸು ಮಾಡಿತ್ತು ಎಂದು ಅವರು ತಿಳಿಸಿದರು.
ಪ್ರಸ್ತುತ ಸಿದ್ಧರಾಮಯ್ಯ ಅವರ ನೇತೃತ್ವದಲ್ಲಿನ ರಾಜ್ಯ ಸರ್ಕಾರವು ಕಳೆದ ಜನವರಿ 18ರಂದು ಮೀಸಲಾತಿ ವರ್ಗೀಕರಣ ಜಾರಿಗಾಗಿ ಕೇಂದ್ರಕ್ಕೆ ಮತ್ತೊಮ್ಮೆ ಶಿಫಾರಸ್ಸು ಮಾಡಿತು. ಹಾಗೆಯೇ ಈಗ ಸರ್ವೋಚ್ಛ ನ್ಯಾಯಾಲಯವು ಮೀಸಲಾತಿ ವರ್ಗೀಕರಣಕ್ಕೆ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಹೇಳಿದೆ. ಇದು ಸ್ವಾಗತಾರ್ಹ. ಹಾಗಾಗಿ ಕೂಡಲೇ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಅವರು, ಇದೇ ಆಗಸ್ಟ್ 21ರಂದು ಉತ್ತರ ಭಾರತದಲ್ಲಿ ವರ್ಗೀಕರಣ ಮೀಸಲಾತಿ ವಿರೋಧಿಸಿ ಕೆಲ ರಾಜಕಾರಣಿಗಳು ಬಂದ್ ಕರೆ ಕೊಟ್ಟಿದ್ದು, ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಆ ಬಂದ್ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ್ ಕಾಳಗಿ, ಬಸವರಾಜ್ ಮೇತ್ರಿ (ನಾಯ್ಕಲ್), ಚಂದ್ರಕಾಂತ್ ಸಗರಕರ್, ಮಲ್ಲಿಕಾರ್ಜುನ್ ಕುರಕುಂದಿ, ಮಲ್ಲಪ್ಪಾ ಚಿಗಾನೂರ್, ಶಿವರಾಜ್ ಜಿನಕೇರಿ, ಮಲ್ಲೇಶಿ ಸೈದಾಪೂರ್ ಮುಂತಾದವರು ಉಪಸ್ಥಿತರಿದ್ದರು.