ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌ಗಳು ಸರ್ಕಾರಿ ಕಚೇರಿಗೆ ನುಗ್ಗಿದ ಮಳೆನೀರು
ಕೋಲಾರ,ಆ,೭-ಬರಪೀಡಿತ ಜಿಲ್ಲೆಯಾದ ಕೋಲಾರ ಜಿಲ್ಲೆಯಲ್ಲಿ ಯಾವುದೇ ನದಿನಾಲೆಗಳಿಲ್ಲ, ಕೆರೆಗಳ ತವರೂರಾದ ಕೋಲಾರ ಜಿಲ್ಲೆಗೆ ಮಳೆಯೇ ಆಧಾರವಾಗಿದ್ದು, ಮಂಗಳವಾರ ಸಂಜೆ ಜಡಿ ಮಳೆಯಿಂದ ಆರಂಭವಾದ ಮಳೆರಾಯ ಜೋರು ಮಳೆ ಬಿದ್ದ ಕಾರಣ ಕೋಲಾರ ನಗರದಲ್ಲಿ ತಗ್ಗು ಮಳೆಪ್ರದೇಶಗಳಲ್ಲಿ ಮಳೆನೀರು ನುಗ್ಗುವ ಮೂಲಕ ಸಾರ್ವಜನಿಕರು ಪರದಾಡ ಪರಿಸ್ಥಿತಿ ಒದಗಿಬಂತು.
ಕಳೆದ ಸಂಜೆ ಬಿದ್ದ ಜೋರು ಮಳೆಯಿಂದ ನಗರದ ಹೊರವಲಯದ ಅರಹಳ್ಳಿ ರೈಲ್ವೆ ಅಂಡರ್ ಪಾಸ್ ಮಳೆ ನೀರಿನಿಂದ ಭರ್ತಿಯಾಗಿ ಮಳೆ ನೀರಿನಲ್ಲಿ ಎರಡು ಕೆ.ಎಸ್.ಆರ್.ಟಿ.ಸಿ. ಬಸ್‌ಗಳು, ಕಾರುಗಳು ಹಾಗೂ ದ್ವಿಚಕ್ರವಾಹನಗಳು ಸಿಲುಕಿಕೊಂಡು ಸಾರ್ವಜನಿಕರು ಪರದಾಡಬೇಕಾಯಿತು.
ಅರಹಳ್ಳಿ ರೈಲ್ವೆ ಅಂಡರ್‌ಪಾಸ್‌ನಲ್ಲಿ ಮಳೆನೀರು ತುಂಬಿಕೊಂಡ ಕಾರಣ ಕೋಲಾರದಿಂದ ವೇಮಗಲ್, ದೇವನಹಳ್ಳಿ, ಚಿಕ್ಕಬಳ್ಳಾಪುರ ಕಡೆಗೆ ತೆರಳುವ ಮುಖ್ಯ ರಸ್ತೆ ನೀರಿನ ಮಧ್ಯೆ ಸಿಲುಕಿಕೊಂಡು ಸುಮಾರು ಒಂದು ಗಂಟೆಗಳ ಕಾಲ ಸಂಚಾರ ಬಂದ್ ಆಗಿ ಸಾರ್ವಜನಿಕರನ್ನು ಇಕ್ಕಟ್ಟಿಗೆ ಸಿಲುಕಿಸಿತು. ಪ್ರಯಾಣಿಕರು ಬಸ್ಸಿನಲ್ಲಿಯೇ ದಿಗ್ಬಂಧನಕ್ಕೆ ಒಳಗಾಗ ಬೇಕಾಯಿತು.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಗಲ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಾಹನ ಸವಾರರಿಗೆ ಬೇರೆ ರಸ್ತೆಯಲ್ಲಿ ಸಂಚಾರ ಮಾಡುವುದಕ್ಕೆ ಸೂಚಿಸುವ ಮೂಲಕ ಅನುವು ಮಾಡಿಕೊಟ್ಟರಲ್ಲದೆ, ಅಗ್ನಿಶಾಮಕ ಸಿಬ್ಬಂದಿಯಿಂದ ನೀರು ಖಾಲಿ ಮಾಡುವ ಕಾರ್ಯಾಚರಣೆ ಗೆ ಮುಂದಾದರು.
ತಹಸೀಲ್ದಾರ್ ಕಚೇರಿ ನುಗ್ಗಿದ ಮಳೆನೀರು:
ಮಂಗಳವಾರ ಸಂಜೆ ಸುರಿದ ಬಾರಿ ಮಳೆಯಿಂದ ಕೋಲಾರದ ತಾಲೂಕು ಆಡಳಿತ ಕಚೇರಿಗೆ ನುಗ್ಗುವ ಮೂಲಕ ಮಳೆರಾಯ ತನ್ನ ಪ್ರತಾಪ ತೋರಿಸಿಕೊಟ್ಟಿದೆ. ಕಛೇರಿಗೆ ತಹಸೀಲ್ದಾರ್ ನಯನ ಭೇಟಿ ನೀಡಿ ಸಿಬ್ಬಂದಿಯು ಮಳೆನೀರನ್ನು ಹೊರಹಾಕುವ ಮೂಲಕ ಯಾವುದೇ ಕಡತಗಳಿಗೆ ಹಾನಿಯಾಗದ್ದಂತೆ ಕ್ರಮಕೈಗೊಂಡರು.