ಸೊನ್ನ ಬ್ಯಾರೇಜ್‌ಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿ, ಪರಿಶೀಲನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಆ,೭:ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಂಗಳವಾರ ಭೀಮಾನದಿಗೆ ನಿರ್ಮಿಸಲಾಗಿರುವ ಸೊನ್ನ ಬ್ಯಾರೇಜ್‌ಗೆ ಕಲ್ಬುರ್ಗಿ ಜಿಲ್ಲಾಧಿಕಾರಿಗಳಾದ ಫೌಜಿಯಾ ತರನ್ನುಮ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಹಾರಾಷ್ಟ್ರದ ಉಜನಿ ಹಾಗೂ ವೀರ ಜಲಾಶಯದಿಂದ ನೀರು ಹರಿಬಿಟ್ಟಿರುವ ಹಿನ್ನಲೆಯಲ್ಲಿ ಭೀಮಾ ನದಿ ಪಾತ್ರದ ಪ್ರವಾಹ ಪರಿಸ್ಥಿತಿ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಭೇಟಿ ನೀಡಿದ ಅವರು, ಈಗಾಗಲೇ ಮಹಾರಾಷ್ಟ್ರದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ನಿಂತಿದ್ದು ಉಜನಿ ಹಾಗೂ ವೀರ ಜಲಾಶಯದಿಂದ ನೀರು ಹರಿಸಲಾಗುತ್ತಿರುವುದರಿಂದ ಭೀಮಾ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಸಂಬAಧಿಸಿದ ಅಧಿಕಾರಿಗಳು ನೀಡುವ ಮುನ್ನೆಚ್ಚರಿಕೆ, ಸೂಚನೆಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ನದಿ ಪಾತ್ರಕ್ಕೆ ಬಟ್ಟೆ ತೊಳೆಯಲು, ದನ, ಕರುಗಳಿಗೆ ನದಿ ಹತ್ತಿರಕ್ಕೆ ಹೋಗದಂತೆ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಈ ಸಂದರ್ಭದಲ್ಲಿ ಬ್ಯಾರೇಜ್‌ನ ಎಲ್ಲ ಕ್ರಸ್ಟಗೇಟ್‌ಗಳನ್ನು ಪರಿಶೀಲನೆ ನಡೆಸಿದ ಅವರು, ಭೀಮಾ ನದಿ ತೀರದಲ್ಲಿ ಪ್ರವಾಹಕ್ಕೊಳಗಾಗುವ ಗ್ರಾಮಗಳ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ಜಿಲ್ಲಾ ಪಂಚಾಯತ ಸಿಇಒ ಬನ್ವರ್‌ಸಿಂಗ್ ಮೀನಾ, ಆಲಮೇಲ ತಹಸೀಲ್ದಾರ ಸುರೇಶ್ ಚಾವಲರ, ಅಫಜಲಪುರ ತಹಸೀಲ್ದಾರ ಸಂಜೀವಕುಮಾರ ದಾಸರ, ಸಂತೋಷ ಸಜ್ಜನ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.