ಕುಮಾರಣ್ಣನವರಿಗೆ ಲೋಕಾಯುಕ್ತ ಎಡಿಜಿಪಿ  ಕ್ಷಮೆಯಾಚಿಸಬೇಕು:   ಮೀನಳ್ಳಿ ತಾಯಣ್ಣ
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.30: ಲೋಕಾಯುಕ್ತ ಎಡಿಜಿಪಿ ಎಂ.ಚಂದ್ರಶೇಖರ್, ಸಿಬ್ಬಂದಿಗೆ ಬರೆದ ಪತ್ರದಲ್ಲಿ, ಕೇಂದ್ರ ಸಚಿವ, ಮಾಜಿ ಸಿ.ಎಂ.ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಪ್ರಸ್ತಾಪಿಸಿ, ಹಂದಿಗಳ ಜೊತೆಗೆ ಕುಸ್ತಿಯಾಡೋಲ್ಲ ಎಂದು ಉಲ್ಲೇಖಿಸಿದ್ದು, ಇದು ಅತ್ಯಂತ ಖಂಡನೀಯ, ಕೂಡಲೇ ಲೋಕಾಯುಕ್ತ ಅಧಿಕಾರಿ ಚಂದ್ರಶೇಖರ್ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ  ಒತ್ತಾಯಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ  ನೀಡಿರುವ ಅವರು ಲೋಕಾಯುಕ್ತ ಅಧಿಕಾರಿ ಚಂದ್ರಶೇಖರ್ ಅವರು, ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದ್ದು, ಅತ್ಯಂತ ಖಂಡನೀಯ, ಸರ್ಕಾರದ ಕೈಗೊಂಬೆಯಾಗಿರುವ ಅವರು, ಕಾನೂನು ಮರೆತಿದ್ದು, ಕೇಂದ್ರ ಸಚಿವ ಕುಮಾರಣ್ಣ ಅವರ ಮೇಲೆ ಸುಳ್ಳು ಕೇಸ್ ಗಳನ್ನು ಹಾಕಲು ಮುಂದಾಗಿದ್ದಾರೆ, ಅವರ ಈ ಆಟ ನಡೆಯೋಲ್ಲ, ಯಾರು ದಡ್ಡರು, ಯಾರು ಬುದ್ಧಿವಂತರು ಎಂಬುದು ಜನರಿಗೆ ತಿಳಿದಿದೆ, ಒಬ್ಬ ಅಧಿಕಾರಿಯಾಗಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುವುದನ್ನು ಬಿಟ್ಟು, ಇನ್ನೊಬ್ಬರ ಮಾತು ಕೇಳಿ ನಾಯಕ ಕುಮಾರಣ್ಣ ಅವರ ವಿರುದ್ಧ ಸುಳ್ಳು ಕೇಸ್ ಹಾಕುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ, ಇದು ಲೋಕಾಯುಕ್ತ ಸoಸ್ಥೆಗೆ ಕೆಟ್ಟ ಹೆಸರು ತರಲಿದೆ, ರಾಜಕಾರಣ ಮಾಡುವದಿದ್ದರೆ, ಅಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಲಿ, ಸರ್ಕಾರದ ಅಧಿಕಾರಿಯಾಗಿ ಉನ್ನತ ಸ್ಥಾನದಲ್ಲಿರುವ ಕೇಂದ್ರ ಸಚಿವ ನಮ್ಮ ಕುಮಾರಣ್ಣ ಅವರ ಬಗ್ಗೆ ಕೆಟ್ಟ ಪದ ಬಳಕೆ ಮಾಡುವುದು ಸರಿಯಲ್ಲ, ಕೂಡಲೇ ಅಧಿಕಾರಿ ಚಂದ್ರಶೇಖರ ಅವರು ಬಹಿರಂಗ ಕ್ಷಮೆಯಾಚಿಸಬೇಕು, ಅವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಕುಮಾರಸ್ವಾಮಿ ಅವರನ್ನು ಎಡಿಜಿಪಿ ಹಂದಿ ಅಂತ ಕರೆದಿಲ್ಲ, ದಾರ್ಶನಿಕ ಬರ್ನಾಡ್ ಷಾ ಅವರ ವಾಕ್ಯವನ್ನು ಉಲ್ಲೇಖಿಸಿದ್ದಾರೆ.
ಉದ್ದೇಶ ಪೂರ್ವಕವಾಗಿ ನಮ್ಮ ಕುಮಾರಣ್ಣ ಅವರ ವಿರುದ್ಧ ಸರ್ಕಾರವೇ ಲೋಕಾಯುಕ್ತದಲ್ಲಿ ಸುಳ್ಳು ಪ್ರಕರಣ ದಾಖಲಿಸಿದೆ ಎಂಬುದು ಇದರಿಂದ ಸಾಬೀತಾಗಿದೆ. ಈ ಪತ್ರದ ಹಿಂದೆ ಕಾಂಗ್ರೆಸ್ ಸರ್ಕಾರ ಕೈವಾಡವಿದೆ ಎಂದು ಕಿಡಿಕಾರಿದರು. ಈ ಸಂದರ್ಭದಲ್ಲಿ ನಗರ ಘಟಕದ ಅಧ್ಯಕ್ಷ ಹೊನ್ನೂರು ಸ್ವಾಮಿ ಇದ್ದರು.