23.5 ಕೋಟಿ ರೂ ವೆಚ್ಚದಲ್ಲಿ  ತಾರಾನಾಥಆಯುರ್ವೇದ ಆಸ್ಪತ್ರೆ ಅಭಿವೃದ್ಧಿ ಕಾಮಗಾರಿಗೆ ಭರತ್ ರೆಡ್ಡಿ ಚಾಲನೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.30: ಇಲ್ಲಿನ ಕಲ್ಯಾಣ ಕರ್ನಾಟಕದ ಮೊದನೆಯದಾದ  ತಾರಾನಾಥ ಸರ್ಕಾರಿ  ಆಯುರ್ವೇದ ವೈದ್ಯಕೀಯ  ಮಹಾ ವಿದ್ಯಾಲಯದಲ್ಲಿ  ಇಂದು ಆಸ್ಪತ್ರೆ ಮತ್ತು ಕಾಲೇಜಿನ ಕಟ್ಟಡದ ಉನ್ನತೀಕರಣ ಹಾಗು
ಬೋಧನ ಔಷಧಿ ಘಟಕದ ನಿರ್ಮಾಣದ ಕಾಮಗಾರಿಗೆ  ನಗರ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು.
ಕೆಎಂಇ ಆರ್ ಸಿ ಯ 3.62 ಕೋಟಿ ರೂಗಳ ಅನುದಾನ ದಿಂದ ಬೋಧನ ಆಸ್ಪತ್ರೆಯ ಔಷಧಿ ಉತ್ಪಾದನೆ ಘಟಕ. 19.94 ಕೋಟಿ ರೂ ಗಳ ವೆಚ್ಚದಿಂದ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನ ಕಟ್ಟಡದ ಉನ್ನತೀಕರಣ ಕಾಮಗಾರಿ ಇದಾಗಿದೆ.
ಆಸ್ಪತ್ರೆಯಲ್ಲಿ ಈಗ 100 ಹಾಸಿಗೆಗಳಿದ್ದು ಕಟ್ಟಡದ ಉನ್ನತೀಕರಣದ ನಂತರ 170 ಹಾಸಿಗೆಗಳಿಗೆ ಅವಕಾಶ ದೊರೆಯಲಿದೆ. ಅಲ್ಲದೆ ನಾಲ್ಕು ಅಧುನಿಕ ವ್ಯವಸ್ಥೆಯ ಶಸ್ತ್ರಚಿಕಿತ್ಸೆಯ  ಕೊಠಡಿಗಳು  ಬರಲಿವೆ.
ಶಾಸಕ ಭರತ್ ರೆಡ್ಡಿ ಮಾತನಾಡಿ,. ಕೆಎಂಇ.ಆರ್.ಸಿ  ಯ 1200 ಕೋಟಿ ರೂ ಅನುದಾನದಿಂದ ತುಂಗಭದ್ರ ಜಲಾಶಯದ ಬಳಿಯಿಂದ ಬಳ್ಳಾರಿಗೆ ನೀರು ತರುವ ಕೆಲಸ ಮಾಡಲಿದೆ ಈ ಕಾರ್ಯ ಬರುವ ಆರು ತಿಂಗಳಲ್ಲಿ ಆಗಲಿದೆಂದು ತಿಳಿಸಿದರು.
ಬಳ್ಳಾರಿ ನಗರ ಗಣಿ ಬಾಧಿತ ಪ್ರದೇಶವಲ್ಲ ಎಂದು ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ನಾವು ಹೇಗೆ ಬಳ್ಳಾರಿ ಬಾಧಿತವಾಗಿದೆ ಎಂಬುದನ್ನು ವಿವರಿಸಿ ಆಕ್ಷೇಪಣೆಯನ್ನು ದೂರು ಮಾಡುವಂತೆ ಮಾಡಿದ್ದರಿಂದ ಇಂದು ಈ ಅನುದಾನ ದೊರೆತಿದೆ. ಈ ಕಾರ್ಯ ಆಗದಿದ್ದರೆ, ನಮಗೆ ಕೆ.ಎಂ.ಇ. ಆರ್.ಸಿ ಅನುದಾನ ದೊರೆಯದೇ ಇದ್ದರೆ ಮುಂದಿನ ಪೀಳಿಗೆ ನಮ್ಮ ವಿಫಲತೆಯನ್ನು ಮಾತನಾಡುವಂತೆ ಆಗುತ್ತಿತ್ತು ಎಂದರು.
ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಮಾತನಾಡಿ, ಗ್ಯಾರೆಂಟಿ ಯೋಜನೆಗಳ ಮೂಲಕ ರಾಜ್ಯ ಸರ್ಕಾರ ದಿವಾಳಿಯಾಗಿದೆಂಬ ಆರೋಪ ಸರಿಯಲ್ಲ.  ಹತ್ತಾರು ಕೋಟಿ ರೂಗಳಿಂದ ಈ ಆಸ್ಪತ್ರೆ ಕಟ್ಟಡಗಳ ಅಭಿವೃದ್ಧಿ ಮಾಡುತ್ತಿದೆಂದರು.
ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಶಾಸಕರು ಅನುದಾನ ತಂದು ನಗರದ ಅಭಿವೃದ್ಧಗೆ ಶ್ರಮಿಸುತ್ತಿರುವುದು ಸ್ವಾಗತಾರ್ಹ ವಿಷಯ ಎಂದರು
ಈ ವೇಳೆ ಕಳೆದ 33 ವರ್ಷಗಳಿಂದ ಸೇವೆ ಸಲ್ಲಿಸಿ‌ ಇಂದು ನಿವೃತ್ತಿ ಹೊಂದಿದ  ಕಾಲೇಜಿನ ಪ್ರಾಂಶುಪಾಲೆ ಡಾ.ಸೈಯ್ಯದಾ ಅತ್ಹರ್  ಫಾತಿಮಾ ಅವರನ್ನು ಸನ್ಮಾನಿಸಿ ಗೌರವಿಸಿದರು.  ಕಾಲೇಜಿನ ಅಭಿವೃದ್ದಿಗೆ ಕೆ ಎಂ ಇ. ಆರ್ ಸಿ ಯಿಂದ  ಒಟ್ಟಾರೆ 39 ಕೋಟಿ ರೂ ದೊರೆತಿದೆ. ಯೋಜನೆಯ ಮೊದಲ ಕಾಮಗಾರಿ‌ ಇದು ಎಂದ ಅವರು ಕಾಮಗಾರಿಯೇ ಆರಂಭವಾಗದ ಮುನ್ನ ಇವರು ಒಳ್ಳೆಯ ಗುತ್ತಿಗೆದಾರರು ಎಂದು ಹೊಗಳಿದ್ದು ಮಾತ್ರ ಅಚ್ಚರಿ ಮೂಡಿಸಿತು. ನಿವೃತ್ತ ಹೊಂದುವ ಅವರನ್ನು ಗುತ್ತಿಗೆದಾರರು ಸರಿಯಾಗಿಯೇ ಗೌರವಿಸಿರಬೇಕೆನಿಸುತ್ತದೆ.
ವೇದಿಕೆಯಲ್ಲಿ ಪಾಲಿಕೆಯ ಸದಸ್ಯರಾದ ಕವಿತಾ ಹೊನ್ನಪ್ಪ, ಎಂ.ರಾಮಾಂಜನೇಯಲು, ನೂರ್ ಅಹಮ್ಮದ್, ಮುಖಂಡರಾದ ಬಿ.ಆರ್.ಎಲ್.ಸೀನಾ, ಮುಖಂಡರಾದ ವಿಷ್ಣು ಬೋಯಪಾಟಿ ಹೊನ್ನೂರಪ್ಪ ಕೆ ಮೊದಲಾದವರು ಇದ್ದರು.
ಚೈತ್ರ ಪಾರ್ಥನೆ, ಡಾ.ರಾಜಶೇಖರ್ ಗಾಣಿಗೇರ ಕಾರ್ಯಕ್ರಮ ನಿರ್ವಹಣೆ ಮಾಡಿದರು‌.
ಮಾಧ್ಯಮ ದೂರವಿಟ್ಟು:
ಇಂತಹ ಕೋಟ್ಯಾಂತರ ರೂಪಾಯಿಗಳ ಅಡಿಗಲ್ಲು ಕಾರ್ಯಕ್ರಮಕ್ಕೆ ಮಾಧ್ಯಮದವರ ಗಮನಕ್ಕೆ ತರದೇ ಮಾಡಿದ್ದು ಮಾತ್ರ ವಿಪರ್ಯಾಸದ ಸಂಗತಿಯಾಗಿದೆ.