ತೋರಿಕೆ ವಿಭಿನ್ನ, ಇರುವಿಕೆ ಒಂದೇ ! – ಎನ್.ಬಸವರಾಜ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.30: ಸೃಷ್ಟಿಯ ಜೀವ, ಜಡ ಜಗತ್ತು ತೋರಿಕೆಯಲ್ಲಿ ವೈವಿಧ್ಯಮಯ ಹಾಗೂ ವಿಭಿನ್ನವಾಗಿ ಕಂಡು ಬರುತ್ತವೆ. ಆದರೆ ಆಂತರ್ಯದಲ್ಲಿ ಒಂದೇ ಆಗಿದೆ. ಇದನ್ನು ಅರಿಯಲು ವಿಶೇಷ ಜ್ಞಾನ ಅಗತ್ಯ, ಈ ಜ್ಞಾನವನ್ನೇ ವಿಜ್ಞಾನವೆಂದು ಕರೆಯಲಾಗಿದೆ ಎಂದು ವಿಶ್ರಾಂತ ಉಪನ್ಯಾಸಕರಾದ ಎನ್.ಬಸವರಾಜ ಅಭಿಪ್ರಾಯಪಟ್ಟರು.
ಬಳ್ಳಾರಿಯ ತಿಲಕ್ ನಗರದ ಶ್ರೀ ಭವಾನಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಏರ್ಪಡಿಸಿದ್ದ 305ನೇ ಮಹಾಮನೆ ಲಿಂ|| ಶ್ರೀಮತಿ ತುಳಜಮ್ಮ ಲಕ್ಷ್ಮಪ್ಪ ಜಾಧವ್ ದತ್ತಿ ಮತ್ತು ಲಿಂ|| ಶ್ರೀ ಕಪ್ಪಗಲ್ಲು ನಬೀಸಾಬ್ ಹೊನ್ನೂರಮ್ಮ ದತ್ತಿ ಕಾರ್ಯಕ್ರಮದಲ್ಲಿ ಶರಣರ ವೈಜ್ಞಾನಿಕ ನಿಲುವು ವಿಷಯ ಕುರಿತು ಮಾತನಾಡುತ್ತಾ, ಮಾನವ ಕೇವಲ ವಿಶ್ವಾಸ, ಮೂಢನಂಬಿಕೆಗಳಿಂದ ಬಾಳದೇ ವಿವೇಕ ಜ್ಞಾನದಿಂದ ಬಾಳಬೇಕೆಂದು ಶರಣರು ಸಾರಿದ್ದಾರೆ.
ಶರಣರ ಆಡಿದ ಮಾತು, ಬರೆದ ವಚನ ಸಾಹಿತ್ಯ ವೆಲ್ಲವು ವೈಜ್ಞಾನಿಕ ನಿಲುವಿನಿಂದ ಕೂಡಿವೆ ಎಂದರು. ಕಲ್ಲನಾಗರ ಕಂಡರೆ.. ನೀರ ಕಂಡಲ್ಲಿ……, ಹುತ್ತವ ಬಡಿದಡೆ….., ಮುಂತಾದ ಹಲವಾರು ವಚನಗಳನ್ನು ಉದಾಹರಿಸುತ್ತಾ, ಮೂಢನಂಬಿಕೆಯನ್ನು ಭಂಜಿಸಿ, ವಾಸ್ತವ ಸತ್ಯವನ್ನು ಜನತೆ ಅರಿಯುವಂತೆ ಮಾಡುವುದೇ ಶರಣರ ಮೂಲ ಉದ್ದೇಶವಾಗಿತ್ತು ಎಂದರು.
ಅತಿಥಿಗಳಾಗಿ ಭಾಗವಹಿಸಿದ್ದ ಕೊಪ್ಪಳದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಪನಮೇಶಲು ರವರು ಮಾತನಾಡುತ್ತಾ, ಚಿತ್ರಕಲಾವಿದರಿಗೆ ವಿಶೇಷವಾಗಿ ಗ್ರಹಿಕೆ, ತಾಳ್ಮೆ, ಸಹನೆ ಮುಂತಾದ ಗುಣಗಳು ಅಗತ್ಯವಾಗಿ ಬೇಕು. ಹನ್ನೆರಡನೇ ಶತಮಾನದ ಶರಣರು ಚಿತ್ರಕಲಾವಿದರಾಗಿರದೇ, ಮಾನವರ ಬದುಕನ್ನು ತಿದ್ದಿ ತೀಡಿ ಶಿವ ಮೆಚ್ಚುವಂತೆ ರೂಪಗೊಳಿಸಿದ ಲೋಕ ಕಲಾವಿದರಾಗಿದ್ದಾರೆ ಎಂದರು.
ಕಾಂತೆ ಬೆನ್ನೂರಿನ ನಿವೃತ್ತ ಚಿತ್ರಕಲಾ ಶಿಕ್ಷಕರಾದ ಪಿ.ಎನ್.ನೆಗಳೂರಮಠ,ತಾಲೂಕು ಮಟ್ಟದ ಕಾಯಕ ರತ್ನ ಪ್ರಶಸ್ತಿ ಪಡೆದ ಗೆಣಕೆಹಾಳ್‍ನ ಸ.ಪ್ರೌ.ಶಾಲೆಯ ಚಿತ್ರಕಲಾ ಶಿಕ್ಷಕ ಎಂ.ಬಸವರಾಜರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ದತ್ತಿ ದಾಸೋಹಿಗಳಾದ ಆರ್.ಎಲ್.ಜಾಧವ್ ಮತ್ತು ಕಪ್ಪಗಲ್ಲು ರಸೂಲ್‍ಸಾಬ್ ಮನ್ಸೂರಿ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಅತಿಥಿಗಳಾದ ಪನಮೇಶಲು, ಉಪನ್ಯಾಸಕರಾದ ಎನ್.ಬಸವರಾಜರನ್ನು ಗೌರವಿಸಿದರು.
ಚಿತ್ರಕಲಾ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಆರ್.ಎಲ್.ಜಾಧವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಪ್ರೇಮಲತ ಪ್ರಾರ್ಥನೆ ಮಾಡಿದರು. ಕಲಾ ಶಿಕ್ಷಕ ಪಂಪನಗೌಡ ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ಪ್ರಾಸ್ತಾವಿಕ ನುಡಿಗಳೊಂದಿಗೆ ಶರಣು ಸಮರ್ಪಣೆ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಹಿರಿಯ ಸಾಹಿತಿ ಗಂಗಾಧರ ಪತ್ತಾರ, ನ್ಯಾಯವಾದಿಗಳಾದ ಕೆ.ಮುಸ್ತಾಕ್, ಕೆ.ಬಿ.ಕೊಟ್ರೇಶ್, ಸಿ.ಕೊಟ್ರಪ್ಪ ಹಾಗೂ ಚಿತ್ರಕಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಳವಾಯಿತು.