ಜೀವನದಲ್ಲಿ ಒಳ್ಳೆಯ ಮಾರ್ಗದತ್ತ ನಡೆಯಿರಿ: ಸರಡಗಿ ಶ್ರೀಗಳು ಕರೆ
ಕಲಬುರಗಿ,ಆ.6-ಮನುಷ್ಯನ ಜೀವನದಲ್ಲಿ ಒಳ್ಳೆಯ ಕಾಯಕ ಮಾಡುತ್ತಾ ಹೋದಾಗ ನಿಜವಾದ ಜೀವನದ ಅರ್ಥ ಅರಿವಾಗುತ್ತದೆಂದು ಶ್ರೀನಿವಾಸ ಸರಡಗಿಯ ಡಾ.ರೇವಣಸಿದ್ಧ ಶಿವಾಚಾರ್ಯರು ಹೇಳಿದರು.
ಇಲ್ಲಿನ ಶಿವಾಜಿನಗರದ ಅಂಬಾ ಭವಾನಿ ದೇವಸ್ಥಾನ ಅವರಣದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಹಮ್ಮಿಕೊಂಡ ಶಿವಭಕ್ತರ ಮನೆ ಮನೆಗೆ 18ನೇ ವರ್ಷದ ಸಿದ್ಧಾಂತಶಿಖಾಮಣಿ ಜ್ಞಾನಜ್ಯೋತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮ ಸುಮಾರು 18 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವುದು ಹೆಮ್ಮೆ ವಿಷಯ. ಈ ಸಂಸ್ಥೆ ಇನ್ನೂ ಉತ್ತಮ ಸೇವೆಯಲ್ಲಿ ತೊಡಗಲಿ ಎಂದು ಹೇಳಿದರು. ಪವಿತ್ರ ಶ್ರಾವಣ ಮಾಸದ ಅಂಗವಾಗಿ ಭಕ್ತರ ಮನೆಮನೆಗೆ ಹೋಗಿ ಸಿದ್ಧಾಂತ ಶಿಖಾಮಣಿ ಬಗ್ಗೆ ಅರಿವು ಮೂಡಿಸುವುದು ಮತ್ತು ಸಮಾಜದ ಬಗ್ಗೆ ಕಳಕಳಿಯಿಂದ ಈ ಕಾರ್ಯಕ್ರಮ ನಡೆಯುವುದು ಸಕಲ ಸದ್ಭಕ್ತರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಕಾರ್ಯಕ್ರಮವನ್ನು ದಕ್ಷಿಣ ಮತ ಕ್ಷೇತ್ರದ ಶಾಸಕ ಅಲ್ಲಂಪ್ರಭು ಪಾಟೀಲ್ ಅವರು ಉದ್ಘಾಟಿಸಿ ಮಾತನಾಡುತ್ತ, ಈ ಸಂಸ್ಥೆ ದೊಡ್ಡ ಪ್ರಮಾಣದಲ್ಲಿ ನಡೆಯುವುದನ್ನು ನೋಡಿದರೆ ನನಗಂತೂ ಬಹಳ ಹೆಮ್ಮೆಯ ವಿಷಯ ಎನಿಸುತ್ತದೆ. ಈ ಸಂಸ್ಥೆ ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದರು.
ಉಪನ್ಯಾಸಕರಾದ ಸಿದ್ಧಾನಂದ ಶಿವಯೋಗಿಗಳು ಸಿದ್ಧಾಂತ ಶಿಖಾಮಣಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಸವರಾಜ ಪಾಟೀಲ ಹೇರೂರ ಮಾತನಾಡುತ್ತ, ನಮ್ಮ ಸಂಸ್ಥೆ ಹಲವಾರು ಕಷ್ಟಕಾರ್ಪಣ್ಯಗಳಿದ್ದರೂ ಮುನ್ನಡೆಸುತ್ತಾ ಬಂದಿರೋ ವಿಷಯ ತಮ್ಮೆಲ್ಲರಿಗೂ ತಿಳಿದ ವಿಷಯ ಇದಕ್ಕೆ ಸಹಾಯ ಸಹಕಾರ ಬಹಳ ಅವಶ್ಯಕ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಕಲಬುರಗಿ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಶರಣು ಮೋದಿ, ಕಾಂಗ್ರೆಸ್ ಮುಖಂಡ ನೀಲಕಂಠರಾವ ಮೂಲಗೆ, ಮಹಾನಗರ ಪಾಲಿಕೆ ಸದಸ್ಯೆ ಗಂಗಮ್ಮ ಬಸವರಾಜ ಮುನ್ನಳ್ಳಿ ಆಗಮಿಸಿದ್ದರು. ಸಂಸ್ಥೆಯ ಅಧ್ಯಕ್ಷ ರಾಜಶೇಖರ್ ಪಾಟೀಲ್ ಬೆಡಸೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೈ ಗುರುದೇವ, ಬಸವರಾಜ್ ಎಸ್. ಮಠ, ಪ್ರಯೋಜಕರಾದ ರಾಜೇಂದ್ರ ಎಸ್ ಬಿರಾದಾರ್, ಶಿವರಾಯ ಮುಲಗೆ, ಗಂಗಾಧರ್ ಸ್ವಾಮಿ, ಕೇದಾರನಾಥ ಮಲಪಗೋಳ, ಮಹಾದೇವಪ್ಪ ಆಲಗೂಡಕರ, ರಾಜಶೇಖರ್ ಬಿರಾದಾರ, ವಿಶ್ವನಾಥ್ ವಾಗಣಗೇರಿ, ಶಿವಯ್ಯ ಮಠಪತಿ, ಜಗದೇವಪ್ಪ ಕಲಬುರಗಿ, ಬಸಯ್ಯಸ್ವಾಮಿ ಕೊಡದೂರ, ದತ್ತು ಜಾನಕರ್ ಮತ್ತು ಬಡಾವಣೆಯ ಸದ್ಭಕ್ತರು ಉಪಸ್ಥಿತರಿದ್ದರು.
ಶಿವಾನಂದ ಕಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಅಂಬಾರಾಯ ಕೋಣೆ ಸ್ವಾಗತಿಸಿದರು. ಶಿವರುದ್ರಯ್ಯ ಸ್ವಾಮಿ, ಮಹಾಲಿಂಗಯ್ಯ ಸ್ವಾಮಿ ಸುಂಟನೂರ ತಂಡದವರಿಂದ ವೇದಘೋಷ ಕಾರ್ಯಕ್ರಮ ಜರುಗಿತು. ಜಗದೀಶ್ ಪಸಾರ್, ಮಲ್ಲಿಕಾರ್ಜುನ ಮುಕರಂಬಿ ಕಲಾತಂಡದವರಿಂದ ಸಂಗೀತ ಕಾರ್ಯಕ್ರಮ ಜರಗಿತು. ದೇವಸ್ಥಾನದ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಉಪಸ್ಥಿತರಿದ್ದರು.