ಸರ್ಕಾರಿ ಸೇವೆ ಒದಗಿಸುವುದರಲ್ಲಿ ಜಿಲ್ಲೆ ನಂಬರ್ ಒನ್: ಸಚಿವ ಖರ್ಗೆ ಸಂತಸ
ಕಲಬುರಗಿ,ಆ.6-ಸರ್ಕಾರಿ ಸೇವೆಯನ್ನು ಸಕಾಲದಲ್ಲಿ ಒದಗಿಸುವುದರಲ್ಲಿ ಕಲಬುರಗಿ ನಂಬರ್ 1 ಸ್ಥಾನ ಪಡೆದಿರುವುದಕ್ಕೆ ಜಿಲ್ಲಾ ಉಸ್ತುವಾರಿ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಬಗ್ಗೆ ತಮ್ಮ ಟ್ವಟಿರ್ ( ಎಕ್ಸ್) ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸಾರ್ವಜನಿಕರಿಗೆ ಸರ್ಕಾರಿ ಸೇವೆಗಳನ್ನು ಸಕಾಲಕ್ಕೆ ಒದಗಿಸುವುದರಲ್ಲಿ ಮತ್ತು ವಿಲೇವಾರಿ ಮಾಡುವುದರಲ್ಲಿ ರಾಜ್ಯದಲ್ಲಿಯೇ ಕಲಬುರಗಿ ಜಿಲ್ಲೆಯು ನಂ-1 ಸ್ಥಾನದಲ್ಲಿದೆ. ಸಕಾಲ ಯೋಜನೆಯಡಿ “ಇಂದು ನಾಳೆ ಇನ್ನಿಲ್ಲ, ಹೇಳಿದ ದಿನ ತಪೆÇ್ಪಲ್ಲ” ಎಂಬ ಘೋಷವಾಕ್ಶದೊಂದಿಗೆ ರಾಜ್ಯದ 100 ಇಲಾಖೆಯಡಿ 1,181 ಸೇವೆಗಳನ್ನು ಒದಗಿಸಲಾಗುತ್ತಿದ್ದು, ಕಳೆದ ಜುಲೈ ತಿಂಗಳಲ್ಲಿ ಸಲ್ಲಿಕೆಯಾದ ಒಟ್ಟು 1,58,990 ಅರ್ಜಿಗಳಲ್ಲಿ 1,46,088 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಇದರಿಂದ ಸಾರ್ವಜನಿಕರು ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆ ಇಮ್ಮಡಿಗೊಂಡಿದೆ.
ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆಗಳನ್ನು ಒದಗಿಸುವುದಕ್ಕೆ ನಮ್ಮ ಸರ್ಕಾರ ಹಲವು ವಿನೂತನ ಯೋಜನೆಗಳನ್ನು ಜಾರಿ ಮಾಡಿ ಆಡಳಿತದಲ್ಲಿ ಪಾರದರ್ಶಕತೆ ತರುವುದರಲ್ಲಿ ಮುಂಚೂಣಿಯಲ್ಲಿದೆ. ಈ ಪ್ರತಿಫಲಕ್ಕಾಗಿ ಶ್ರಮಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ಸಚಿವರು ಹೇಳಿದ್ದಾರೆ.