ಯುದ್ದಪೀಡಿತ ರಷ್ಯಾದಿಂದ ಕಲಬುರಗಿ ಯುವಕರ ಕರೆತನ್ನಿ
ಕಲಬುರಗಿ,ಆ.6-ಯುದ್ದಪೀಡಿತ ರಷ್ಯಾ, ಉಕ್ರೇನ್‍ನಿಂದ ಕಲಬುರಗಿ ಯುವಕರ ವಾಪಸಾತಿಗಾಗಿ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ರೂಲ್ 377 ಅಡಿಯಲ್ಲಿ ಸಂಸತ್ತಿನಲ್ಲಿ ಲಿಖಿತ ರೂಪದ ಪ್ರಶ್ನೆ ಎತ್ತಿದ್ದಾರೆ.
ಕಲಬುರಗಿ ಮೂಲದ ಮೂವರು ಯುವಕರಿಗೆ ಉದ್ಯೋಗ ಕೊಡಿಸುವ ಆಮಿಷ ತೋರಿಸಿ ಯುದ್ದಪೀಡಿತ ರಷ್ಯಾ ಹಾಗೂ ಉಕ್ರೇನ್ ಗಡಿಯಲ್ಲಿ ಮುಂಚೂಣಿ ಘಟಕದಲ್ಲಿ ಹೋರಾಡಲು ತೊಡಿಗಿಸಲಾಗಿದೆ. ಈ ವಿಷಯದ ಕುರಿತಂತೆ ರಾಜ್ಯಸಭೆಯ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ವಿದೇಶಾಂಗ ವ್ಯವಹಾರಗಳ ಸಚಿವರಾದ ಜೈಶಂಕರ್ ಅವರಿಗೆ ಫೆಬ್ರುವರಿ 22,2024 ರಂದು ಪತ್ರ ಬರೆದಿದ್ದರು. ಸದರಿ ಪತ್ರಕ್ಕೆ ಉತ್ತರಿಸಿದ್ದ ಸಚಿವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಜೊತೆಗೆ ಪ್ರಧಾನ ಮಂತ್ರಿಗಳು ರಷ್ಯಾದ ಅಧ್ಯಕ್ಷರೊಂದಿಗೆ ಸಭೆ ನಡೆಸಿದ್ದರೂ ಕೂಡಾ ಇದೂವರೆಗೆ ಯಾವುದೇ ಮಾಹಿತಿ ಇರುವುದಿಲ್ಲ.
ಈ ರೀತಿ ಯುದ್ದಪೀಡಿತ ಪ್ರದೇಶದಲ್ಲಿ ಮುಂಚೂಣಿ ಘಟಕದಲ್ಲಿ ಹೋರಾಟ ಮಾಡುತ್ತಿದ್ದ ಹೈದರಾಬಾದ್ ಹಾಗೂ ಹರ್ಯಾಣ ಮೂಲದ ಮೂವರು ಯುವಕರ ಜೀವ ಹಾನಿಯಾಗಿದೆ. ಹಾಗಾಗಿ, ಈ ಮೂಲಕ ಕಲಬುರಗಿ ಮೂಲದ ಮೂವರು ಯುವಕರನ್ನು ಸುರಕ್ಷಿತವಾಗಿ ಹಾಗೂ ಆರೋಗ್ಯವಾಗಿ ವಾಪಸ್ ಕರೆಸಿಕೊಳ್ಳಲು ರಷ್ಯಾ ದೇಶದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಅವಶ್ಯಕ ಚರ್ಚೆ ಮಾಡಬೇಕು ಎಂದು ಈ ಮೂಲಕ ಸರ್ಕಾರವನ್ನು ಆಗ್ರಹಿಸುತ್ತೇನೆ ಎಂದು ರಾಧಾಕೃಷ್ಣ ಅವರು ಪ್ರಶ್ನೆಯಲ್ಲಿ ಉಲ್ಲೇಖಿಸಿದ್ದಾರೆ.