ಶರಣಬಸವೇಶ್ವರರು ಕಾಮಧೇನು ಕಲ್ಪವೃಕ್ಷ
ಕಲಬುರಗಿ,ಆ.6-ನಗರದ ಬಸವೇಶ್ವರ ಕಾಲೊನಿಯ ಶಿವ ಮಂದಿರದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿರುವ ಮಹಾದಾಸೋಹಿ ಕಲಬುರ್ಗಿ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮವನ್ನು ಮಕ್ತಂಪೂರ ಗದ್ದುಗೆ ಮಠದ ಚರಲಿಂಗ ಮಹಾ ಸ್ವಾಮಿಗಳು ಉದ್ಘಾಟಿಸಿದರು.
ಪುರಾಣ, ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಶರಣಬಸವೇಶ್ವರರು ಕಾಮದೇನು ಕಲ್ಪವೃಕ್ಷವಾಗಿದ್ದಾರೆ. ಬೇಡಿದ ಭಕ್ತರಿಗೆ ಸಂತಾನ ಭಾಗ್ಯವನ್ನು ಇಂದಿಗೂ ನೀಡುತ್ತಾ ಬರುತ್ತಿರುವುದು ಇದು ಶರಣರ ಲೀಲೆಗೆ ಉದಾಹರಣೆಯಾಗಿದೆ ಎಂದರು.
ಪುರಾಣ ಪ್ರವಚನವನ್ನು ಆರಂಭಿಸಿದ ನಾಡಿನ ಖ್ಯಾತ ಪುರಾಣ ಪ್ರವಚನಕಾರರಾದ ಸುಂಟನೂರ ಸಂಸ್ಥಾನ ಹಿರೇಮಠದ ಬಂಡಯ್ಯ ಶಾಸ್ತ್ರಿಗಳು ಮಾತನಾಡಿ, ಮನಸ್ಸನ್ನು ಸ್ವಚ್ಛಗೊಳಿಸಿಕೊಳ್ಳಲು ಪುರಾಣ, ಪ್ರವಚನ ಆಲಿಸಬೇಕು. ಶರಣಬಸವೇಶ್ವರರು ದಾಸೋಹ ಕಾಯಕದಿಂದ ದೇವರನ್ನು ಕಂಡವರು ಎಂದರು.
ಇದೇ ಸಂದರ್ಭದಲ್ಲಿ ಕಲಾವಿದರಾದ ಚೇತನ್ ಸ್ವಾಮಿ ಬೀದಿಮನಿ ಅವರ ಸಂಗೀತಕ್ಕೆ ಕಲ್ಮೇಶ ದೇಸಾಯಿ ಕಲ್ಲೂರ ತಬಲಾ ಸೇವೆ ನೀಡಿದರು. ಶಿವ ಮಂದಿರ ಸಮಿತಿ ಅಧ್ಯಕ್ಷರಾದ ಭಿಮಾಶಂಕರ್ ಚಕ್ಕಿ, ಮಲ್ಲಿನಾಥ ಭೋಳಶೆಟ್ಟಿ ಹಾಗೂ ಸರ್ವ ಪದಾಧಿಕಾರಿಗಳು ಕಾಲೊನಿಯ ಸಮಸ್ತ ಸದ್ಭಕ್ತರು ತಾಯಿಯಂದಿರು ಭಾಗವಹಿಸಿದ್ದರು.