ಅಗ್ನಿಶಾಮಕ ಅಧಿಕಾರಿ, ಕಾನ್ಸಸ್ಟೇಬಲ್, ಜೆಇ ಲೋಕಾ ಬಲೆಗೆ
ಕಲಬುರಗಿ,ಆ.6-ಪೆಟ್ರೋಲ್ ಬಂಕ್‍ಗೆ ಎನ್‍ಒಸಿ ಪ್ರಮಾಣಪತ್ರ ಮಾಡಿಸಿಕೊಡಲು 1 ಲಕ್ಷಕ್ಕೆ ಬೇಡಿಕೆ ಇಟ್ಟು ಮೊದಲ ಕಂತಾಗಿ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ ಕಾನ್‍ಸ್ಟೆಬಲ್ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮತ್ತೊಂದು ಕಡೆ ಚಿತ್ತಾಪುರ ಪಿಡಬ್ಲ್ಯುಡಿ ಜೆಇ ಅವರನ್ನೂ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಅಗ್ನಿಶಾಮಕ ತುರ್ತು ಸೇವೆಗಳ ಅಧಿಕಾರಿ ಗುರುರಾಜ್ ಹಾಗೂ ಕಾನ್‍ಸ್ಟೆಬಲ್ ಸೋಪನರಾವ್, ಚಿತ್ತಾಪುರ ಪಿಡಬ್ಲ್ಯೂಡಿ ಜೆಇ ಖದೀರ್ ಪಟೇಲ್ ಲೋಕಾಯುಕ್ತ ಬಲೆಗೆ ಬಿದ್ದವರು.
ಚಿತ್ತಾಪುರದ ರಾಜರಾಮಪ್ಪ ನಾಯಕ್ ಅವರು ನೀಡಿದ ದೂರಿನ ಅನ್ವಯ ಲೋಕಾಯುಕ್ತ ಎಸ್.ಪಿ. ಜಾನ್ ಆಂಟೋನಿ ಮಾರ್ಗದರ್ಶನದಲ್ಲಿ ಡಿಎಸ್‍ಪಿ ಮಂಜುನಾಥ್ ಗಂಗಲ್, ಇನ್‍ಸ್ಪೆಕ್ಟರ್ ಧ್ರುವತಾರಾ ಸಿ, ತಿಗಡಿ, ಸಿಬ್ಬಂದಿ ಮಲ್ಲಿನಾಥ್, ಮಸೂದ್ ಅವರು ದಾಳಿ ನಡೆಸಿದರು.
ರಾಜರಾಮಪ್ಪ ಅವರ ಪೆಟ್ರೋಲ್ ಬಂಕ್‍ಗೆ ಎನ್‍ಒಸಿ ಪ್ರಮಾಣಪತ್ರ ಕೊಡಲು ಸಾಕಷ್ಟು ಬಾರಿ ಕಚೇರಿಗೆ ಅಲೆದಾಡಿಸಿದ್ದರು. 1 ಲಕ್ಷ ಲಂಚ ಕೊಟ್ಟರೆ ಎನ್‍ಒಸಿ ಮಾಡಿಸಿ ಕೊಡುವುದಾಗಿ ಅಗ್ನಿಶಾಮಕ ಅಧಿಕಾರಿ ಹಾಗೂ ಕಾನ್‍ಸ್ಟೆಬಲ್ ಬೇಡಿಕೆ ಇಟ್ಟಿದ್ದರು. ಕಚೇರಿಯಲ್ಲಿ 20 ಸಾವಿರ ರೂ.ಲಂಚದ ಹಣ ಪಡೆಯುವ ವೇಳೆ ಗುರುರಾಜ್ ಹಾಗೂ ಸೋಪನ್ ರಾವ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೇ ಪ್ರಕರಣದಲ್ಲಿ ಪಿಡಬ್ಲ್ಯುಡಿಯ ಎನ್‍ಒಸಿಗಾಗಿ 25 ಸಾವಿರಕ್ಕೆ ಬೇಡಿಕೆ ಇಟ್ಟು 20 ಸಾವಿರ ಪಡೆಯುತ್ತಿದ್ದಾಗ ಖದೀರ್ ಪಟೇಲ್ ಕೂಡ ‘ಲೋಕಾ’ ಬಲೆಗೆ ಬಿದ್ದಿದ್ದಾರೆ. ನಗರ ಹುಸೇನ್ ಗಾರ್ಡ್‍ನಲ್ಲಿ ಲಂಚದ ಹಣ ಪಡೆಯುತ್ತಿದ್ದಾಗ ಪೆÇಲೀಸ್ ಇನ್‍ಸ್ಪೆಕ್ಟರ್ ರಾಜಶೇಖರ ಹಳಿಗೋದ ಅವರಿದ್ದ ತಂಡ ದಾಳಿ ನಡೆಸಿದೆ. ಮೂವರು ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.