ಭೀಮಾ ತೀರದ 40 ಹಳ್ಳಿಗಳ ಮೇಲೆ ನಿಗಾ ಇಡಿ: ಶಾಸಕ ಡಾ.ಅಜಯ್ ಸಿಂಗ್
ಕಲಬುರಗಿ.ಆ 6: ಮಹಾರಾಷ್ಟ್ರ ರಾಜ್ಯದ ಉಜ್ಜನಿ ಮತ್ತು ವೀರ ಭಟ್ಕರ್ ಜಲಾಶಯದಿಂದ ಭೀಮಾ ನದಿಗೆ ಕಳೆದ 2 ದಿನದಿಂದ 1. 25 ಲಕ್ಷ ಕ್ಯುಸೆಕ್ ನೀರು ಬಿಡಲಾಗುತ್ತಿರುವ ಹಿನ್ನೆಲೆಯಲ್ಲಿ ಜೇವರ್ಗಿ ಮತಕ್ಷೇತ್ರದ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ಬರುವ 40 ಹಳ್ಳಿಗಳಲ್ಲಿ ಭೀಮಾ ಪ್ರವಾಹ ಉಂಟಾಗುವ ಸಾಧ್ಯತೆಗಳಿರುವದರಿಂದ ಅಧಿಕಾರಿಗಳು ಈ ಹಳ್ಳಿಗಳ ಮೇಲೆ ನಿರಂತರ ನಿಗಾ ಇಡಬೇಕು. ಯಾವುದೇ ಕಾರಣಕ್ಕೂ ಜನ ಜಾನುವಾರುಗಳು ಪ್ರವಾಹದಿಂದಾಗಿ ತೊಂದರೆ ಅನುಭವಿಸಬಾರದು, ಅಗತ್ಯ ಬಿದ್ದರೆ ಸುರಕ್ಷಿತ ಸ್ಥಳಗಳಿಗೆ ಎಲ್ಲರನ್ನು ಸ್ಥಳಾಂತರಿಸಿ ಕ್ರಮ ಕೈಗೊಳ್ಳಬೇಕು ಎಂದು ಕೆಕೆಆರ್‍ಡಿಬಿ ಅಧ್ಯಕ್ಷ ಹಾಗೂ ಜೇವರ್ಗಿ ಶಾಸಕ ಡಾ. ಅಜಯ್ ಧರ್ಮಸಿಂಗ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಡಾ. ಅಜಯ್ ಧರ್ಮಸಿಂಗ್ ಅವರು, ಭೀಮಾ ನದಿಗೆ ಹೆಚ್ಚುವರಿ ನೀರು ಹರಿ ಬಿಟ್ಟಿರುವ ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾಧಿಕಾರಿಫೌಜಿಯಾ ತರನ್ನುಮ್, ಜೇವರ್ಗಿಹಾಗೂ ಯಡ್ರಾಮಿ ತಹಶೀಲ್ದಾರ ಅವರಿಗೆ ದೂರವಾಣಿ ಮೂಲಕ ಮಾತನಾಡಿದ್ದು ಅಗತ್ಯ ಪರಿಹಾರ ಹಾಗೂ ರಕ್ಷಣಾ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿರುವದಾಗಿ ಹೇಳಿದ್ದಾರೆ.
ಹೆಚ್ಚಿನ ನೀರು ಮಹಾರಾಷ್ಟ್ರದಿಂದ ಹರಿದು ಜೇವರ್ಗಿ ತಲುಪಲು ಇನ್ನೂ 2 ದಿನವಾದರೂ ಬೇಕಾಗುತ್ತದೆ. ಹೀಗಾಗಿ ಪ್ರವಾಹದ ಆತಂಕ 2 ದಿನಗಳ ನಂತರ ಹೆಚ್ಚಲಿದೆ. ಅಫಜಲಪೂರ ತಾಲ್ಲೂಕಿನ ಭೀಮಾ ಸೊನ್ನ ಬ್ಯಾರೇಜಿಂದಲೂ 33 ಸಾವಿರ ಕ್ಯೂಸೆಕ್ಸ್ ನೀರು ಹೊರಗೆ ಬಿಡುತ್ತಿದ್ದಾರೆ. ಹೀಗಾಗಿ ಜೇವರ್ಗಿ ಕ್ಷೇತ್ರದ ಹಳ್ಳಿಗಳಲ್ಲಿ ಪ್ರವಾಹ ಭೀತಿ ಕಾಡುವ ಸ್ಪಷ್ಟ ಲಕ್ಷಣಗಳಿವೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸೊನ್ನ ಬ್ಯಾರೇಜ್ ಕೆಳಗಡೆ ಇರುವ ನದಿ ಪಾತ್ರದ ಜನರು ಹಾಗೂ ತಾಲೂಕು, ಹೋಬಳಿ, ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳು ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲು ಡಾ. ಅಜಯ್ ಧರ್ಮಸಿಂಗ್ ಸೂಚಿಸಿದ್ದಾರೆ.
ಪ್ರವಾಹ ದಿಂದ ಉಂಟಾಗುವ ಸಾಧ್ಯತೆ ಇರುವಲ್ಲಿ ಪರಿಸ್ಥಿಯನ್ನು ನಿಭಾಯಿಸಲು ನಗರ ಮತ್ತು ಗ್ರಾಮೀಣ ಪ್ರದೇಶದ ತಗ್ಗು ಪ್ರದೇಶಗಳನ್ನು ಜನರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವದು, ಹಾಗೂ ಗುರುತಿಸಲಾದ ಕಾಳಜಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕುರಿತು ಸ್ಥಳ ಪರಿಶೀಲನೆ ಮಾಡುವ ಬಗ್ಗೆಯೂ ಸಿದ್ಧತೆ ಮಾಡಿಕೊಳ್ಳಿ, ಪ್ರವಾಹದಿಂದ ಯಾವುದೇ ಅಹಿತಕರ ಘಟನೆಯಾಗದಂತೆ ಪ್ರತಿ ಗ್ರಾಮಗಳಲ್ಲಿ ಡಂಗೂರ ಸಾರುವುದು,ಮೈಕ್ ಮೂಲಕ ಜಾಗೃತಿ ಮುಡಿಸಲು ಅಗತ್ಯ ಕ್ರಮಗಳಿಗೂ ತಾವು ಸೂಚಿಸಿದ್ದಾಗಿ ಶಾಸಕ ಡಾ. ಅಜಯ್ ಧರ್ಮಸಿಂಗ್ ಹೇಳಿದ್ದಾರೆ.