ಭೀಮಾ ನದಿಗೆ ಭಾರಿ ಪ್ರಮಾಣದ ನೀರು: ಚಡಚಣ, ಇಂಡಿ, ಆಲಮೇಲ, ಸಿಂದಗಿ ತಾಲ್ಲೂಕಿನ ಗ್ರಾಮಗಳಿಗೆ ಪ್ರವಾಹ ಭೀತಿ
ವಿಜಯಪುರ, ಆ.6 :ಮಹಾರಾಷ್ಟ್ರದಲ್ಲಿ ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಉಜನಿ ಹಾಗೂ ವೀರ್ ಜಲಾಶಯಗಳಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಿದ ಹಿನ್ನಲೆ
ಭೀಮಾನದಿ ದಂಡೆಯ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ, ಇಂಡಿ ಆಲಮೇಲ ಹಾಗೂ ಸಿಂದಗಿ ತಾಲೂಕಿನ ಭಾಗದಲ್ಲಿ ಪ್ರವಾಹದ ಆತಂಕ ಜನರಲ್ಲಿ ಮನೆ ಮಾಡಿದೆ.
ಭೀಮಾನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾದ ಹಿನ್ನಲೆ
ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಮಾನಾಂತರದಲ್ಲಿರುವ 8 ಬಾಂದಾರ್ ಕಂ ಬ್ಯಾರೇಜ್ ಗಳು ಮುಳುಗಡೆಯಾಗಿವೆ.
ಕರ್ನಾಟಕದ ಗೋವಿಂದಪುರ-ಭಂಡಾರಕವಟೆ,
ಉಮರಾಣಿ-ಲವಂಗಿ, ಚಣೇಗಾಂವ-ಬರೂರ,
ಹಿಂಗಣಿ-ಆಳಗಿ ಬ್ಯಾರೇಜ್ ಗಳು ಜಲಾವೃತವಾಗಿವೆ.
ಮಹಾರಾಷ್ಟ್ರದ ಹಿಳ್ಳಿ-ಗುಬ್ಬೇವಾಡ,
ಔಜ-ಶಿರನಾಳ, ಚಿಂಚಪೂರ-ಧೂಳಖೇಡ,
ಖಾನಾಪುರ-ಪಡನೂರ ಬ್ಯಾರೇಜ್ ಗಳು ಜಲಾವೃತಗೊಂಡಿವೆ.
ಬ್ಯಾರೇಜ್ ಗಳ ಮೇಲೆ ಎರಡು ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ.
ಮಹಾರಾಷ್ಟ್ರ- ಕರ್ನಾಟಕದ ಕೆಲ ಗ್ರಾಮಗಳ ಸಂಪರ್ಕ ಬಂದ್ ಆಗಿದೆ.
ಎರಡೂ ಬದಿಗೆ ತೆರಳಲು ಸುತ್ತು ಹಾಕಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.
ನದಿಯಲ್ಲಿ ನೀರು ಏರಿಕೆಯಾದ ಕಾರಣ ನೀರಲ್ಲಿ ಮುಳಗಿರುವ
ರೈತರ ಜಮೀನಿಗೆ ನೀರೆತ್ತುವ ಪಂಪ್ ಸೆಟ್ ಗಳು ಜಲಾವೃತವಾಗಿ ಕೆಲವು ಕೊಚ್ಚಿಕೊಂಡು ಹೋಗಿವೆ.
ಉಳಿದ ಪಂಪ್ ಸೆಟ್ ಗಳನ್ನು ರೈತರು ಹೊರ ತೆಗೆದು ಸುರಕ್ಷಿತ ಸ್ಥಳಗಳಿಗೆ ರವಾನೆ ಮಾಡುತ್ತಿದ್ದಾರೆ.
ಮತ್ತಷ್ಟು ನೀರು ಏರಿಕೆಯಾದರೆ ರೈತರ ಜಮೀನಿಗೆ ನುಗ್ಗುವ ಭೀಮೆ
ಕೆಲ ಗ್ರಾಮಗಳಿಗೂ ನೀರು ನುಗ್ಗಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ.
ಜನರು ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.