ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಲ್ಲಿ ಯಾದಗಿರಿ ಜಿಲ್ಲೆ ಉತ್ತಮ ಸಾಧನೆ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ
ಯಾದಗಿರಿ : ಆ.6 : ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯ ಸದುಪಯೋಗವನ್ನು ಜಿಲ್ಲೆಯ ಗರ್ಭಿಣಿಯರು ಸದ್ಬಳಕೆ ಮಾಡಿಕೊಂಡಿದ್ದು, 2024-25ನೇ ಸಾಲಿನಲ್ಲಿ ಮೊದಲ ಪ್ರಸವ ಗರ್ಭಿಣಿ ನೋಂದಣಿ ಸಾಧನೆಯಲ್ಲಿ ರಾಜ್ಯಮಟ್ಟದಲ್ಲಿ 2ನೇ ಸ್ಥಾನ, ಎರಡನೇ ಬಾಣಂತಿಯ ಹೆಣ್ಣು ಮಗು ಜನಿಸಿದ ಫಲಾನುಭವಿಗಳ ನೋಂದಣಿ ಸಾಧನೆಯಲ್ಲಿ ರಾಜ್ಯಮಟ್ಟದಲ್ಲಿ 1ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.
ಮೊದಲ ಪ್ರಸವ ಗರ್ಭಿಣಿ, ಬಾಣಂತಿ ಫಲಾನುಭವಿಗಳ ನೋಂದಣಿಯಲ್ಲಿ 2241 ಫಲಾನುಭವಿಗಳ ಗುರಿ ಇಟ್ಟುಕೊಂಡಿದ್ದು, ಒಟ್ಟು 2615 ಫಲಾನುಭವಿಗಳ ನೋಂದಣಿಯ ಸಾಧನೆ ಮಾಡಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಎರಡನೇ ಬಾಣಂತಿಯ ಮಗು ಹೆಣ್ಣು ಮಗು ಜನಿಸಿದ ಫಲಾನುಭವಿಗಳ ನೋಂದಣಿ ಗುರಿ 475 ಇಟ್ಟುಕೊಂಡಿದ್ದು, 1287 ಫಲಾನುಭವಿಗಳ ನೋಂದಣಿ ಮಾಡಿ ಸಾಧನೆಯಲ್ಲಿ ರಾಜ್ಯಮಟ್ಟದಲ್ಲಿ 1ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸರ್ಕಾರ ಸೌಲಭ್ಯಗಳನ್ನು ದಮನಿತ ಮಹಿಳೆ ಮತ್ತು ಮಂಗಳಮುಖಿಯರಿಗೆ ಸಕಾಲಕ್ಕೆ ತಲುಪಿಸಿ ಅವರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ, ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.
ದಮನಿತ ಮಹಿಳೆಯರು ಹಾಗೂ ಲೈಂಗಿಕ ಅಲ್ಪಸಂಖ್ಯಾತರಿಗೆ ಮನೆಗಳ ನಿರ್ಮಾಣ, ಈ ವರ್ಗದ ವಿದ್ಯಾವಂತರಿಗೆ ಉದ್ಯೋಗ ಅವಕಾಶ ಕಲ್ಪಿಸುವುದು, ಕೌಶಲಾಭಿವೃದ್ಧಿಗೆ ತರಬೇತಿಗಳನ್ನು ಆಯೋಜಿಸುವುದು, ಸಣ್ಣ ಸಣ್ಣ ಉದ್ಯಮಗಳನ್ನು ನಡೆಸಲು ಆಸಕ್ತರಿಗೆ ನೆರವು ಒದಗಿಸುವುದು, ಶಾಲೆಯನ್ನು ತೊರೆದವರಿಗೆ ಶಿಕ್ಷಣ ಮುಂದುವರಿಸಲು ನೆರವು ಒದಗಿಸುವುದು ಪಿಂಚಣಿ ಯೋಜನೆ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ
ಇಲಾಖೆಯ ಯೋಜನೆಗಳಡಿ ಈ ವರ್ಗಗಳಿಗೆ ಸೌಲಭ್ಯಗಳನ್ನು ಒದಗಿಸುವ ಈ ನಿಟ್ಟಿನಲ್ಲಿ ಸಮನ್ವಯತೆಯಿಂದ ಇಲಾಖಾ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಮಕ್ಕಳ ಸಹಾಯವಾಣಿ 1098 ಸಂಖ್ಯೆಯೂ ರಾಷ್ಟ್ರವ್ಯಾಪ್ತಿಯೂ ಚಾಲ್ತಿಯಲ್ಲಿರುವುದರಿಂದ ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಮಕ್ಕಳಾಗಲಿ ಅಥವಾ ಸಾರ್ವಜನಿಕರಾಗಲಿ ತುರ್ತು ನೆರವು ಅಗತ್ಯವಿರುವ ಮಕ್ಕಳು ರಕ್ಷಣೆಯನ್ನು ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.