ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರ ಸಂಘದಿಂದ ಮನವಿ
ತಾಳಿಕೋಟೆ:ಆ.6: 2017 ಹೊಸ ವೃಂದ ನೇಮಕಾತಿ ಮತ್ತು ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ ನೀಡುವ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಜೇಷ್ಠತೆ ಆಧಾರದ ಮೇಲೆ ಬಡ್ತಿ ಸೇರಿದಂತೆ ವಿವಿಧ ಬೇಡಿಕೆಗಳ ಇಡೇರಿಕೆಗಾಗಿ ತಾಲೂಕಾ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತೃತ್ವದಲ್ಲಿ ನೂರಾರು ಶಿಕ್ಷಕರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶಿಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯವು ಶಾಲಾ ಶಿಕ್ಷಣದಲ್ಲಿ ಅನೇಕ ಹೊಸ ಉಪಕ್ರಮಗಳನ್ನು ತರುವುದರ ಮೂಲಕ ದೇಶದಲ್ಲಿ ಮಾದರಿಗಳನ್ನು ನಿರ್ಮಿಸಿದೆ, ಕಾಲಕಾಲಕ್ಕೆ ಆಗುವ ಶೈಕ್ಷಣಿಕ ಬದಲಾವಣೆಗಳನ್ನು ನಮ್ಮ ರಾಜ್ಯದಲ್ಲೂ ಶಾಲಾ ಶಿಕ್ಷಣ ಇಲಾಖೆ ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿರುವುದು ಶ್ಲಾಘನೀಯ, ಕರ್ನಾಟಕ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 1,88,532 ಶಿಕ್ಷಕರಲ್ಲಿ ಹಿರಿಯ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ವಿಶೇಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಾ 1 ರಿಂದ 7, 1 ರಿಂದ 8ನೇ ತರಗತಿಗಳನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತಾ ಬಂದಿದ್ದಾರೆ. ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸ್ಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮವನ್ನು ಬದಲಾಯಿಸಿ, ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ಕುರಿತು ವಿಶೇಷ ರಾಜ್ಯ ಪತ್ರವನ್ನು ಪತ್ರ ಸಂಖ್ಯೆ:434ದಿನಾಂಕ:20-05-2017 ರಂದು ಹೊರಡಿಸಿದ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದವನ್ನು ಮುಖ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5ಕ್ಕೆ 1,12,467 ಹಾಗೂ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು 6 ರಿಂದ 8ಕ್ಕೆ 51,781 ಎಂದು ವೃಂದವಾರು ಹುದ್ದೆಗಳನ್ನು ಮಂಜೂರಿಸಿ ಆದೇಶಿಸಿದೆ. ಇದರ ಪರಿಣಾಮ 2016ಕ್ಕಿಂತ ಮೊದಲು 1 ರಿಂದ 7, 1 ರಿಂದ 8 ವೃಂದಕ್ಕೆ ನೇಮಕಾತಿಯಾದ ಎಲ್ಲಾ ಸಹ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5 ಎಂದು ಪರಿಗಣಿಸಿದ್ದು, ಶಿಕ್ಷಕರಿಗೆ ತೀವ್ರ ಅನ್ಯಾಯವಾಗಿದೆ. 2017ರ ಹೊಸ ವೃಂದಬಲ ನಿಗದಿಯಾಗುವವರೆಗೆ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕ ಗ್ರೇಡ್-2 ವೃಂದಕ್ಕೆ ನಿಯಮಿತವಾಗಿ ಬಡ್ತಿ ನೀಡುವಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಪ್ರಾಥಮಿಕ ಶಾಲೆಗಳಲ್ಲಿ 2017ರ ಹೊಸ ವೃಂದಬಲ ನಿಗದಿಯಿಂದಾಗಿ ಪ್ರೌಢಶಾಲಾ ಸಹ ಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ನೀಡುವಾಗ ಗೊಂದಲಗಳು ಉಂಟಾದುದ್ದನ್ನು ನಮ್ಮ ಸಂಘಟನೆಯು ಬಲವಾಗಿ ತಿಳಿಸುತ್ತಾ ಬಂದಿದ್ದರೂ, ಅದನ್ನು ಪರಿಹರಿಸದೇ, ಮುಂದೂಡುತ್ತಾ ಬರಲಾಗಿದೆ. 1 ರಿಂದ 5 ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪದನಾಮೀಕರಿಸಿರುವ 2016ಕ್ಕಿಂತ ಮೊದಲು ನೇಮಕವಾದ 1 ರಿಂದ 7, 1 ರಿಂದ 8 ವೃಂದದ ಪ್ರಾಥಮಿಕ ಶಾಲಾ ಸಹ ಶಿಕ್ಷಕರಲ್ಲಿ ಸುಮಾರು 80 ಸಾವಿರಕ್ಕೂ ಅಧಿಕ ಶಿಕ್ಷಕರು ಪದವಿಯೊಂದಿಗೆ ಬಿ.ಇಡಿ ವಿದ್ಯಾರ್ಹತೆ ಹೊಂದಿದ್ದರೂ ಇವರನ್ನು 6 ರಿಂದ 8ಕ್ಕೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸದೇ ಇರುವುದು ದುರಾದೃಷ್ಟಕರ, ಇದರ ನಡುವೆ 2016ರಿಂದ ಇತ್ತೀಚೆಗೆ 6ರಿಂದ 8 ವೃಂದದ 20110 ಶಿಕ್ಷಕರ ನೇಮಕಾತಿಯಾಗಿದ್ದು, ತತ್ಪರಿಣಾಮದಿಂದಾಗಿ ಅಷ್ಟೇ ಸಂಖ್ಯೆಯ 1 ರಿಂದ 5 ವೃಂದದ ಶಿಕ್ಷಕರ ಹೆಚ್ಚುವರಿ ಸಮಸ್ಯೆ ಸೃಷ್ಟಿಯಾಗಿತ್ತು. ಅದೇ ರೀತಿ ವರ್ಗಾವಣೆ ಪ್ರಕ್ರಿಯೆಯಲ್ಲೂ ಈ ವೃಂದ ಬಲದ ನಿಗದಿ ಸ್ಥಳಗಳ ಆಯ್ಕೆಯಲ್ಲಿ ತೀವ್ರವಾಗಿ ಶಿಕ್ಷಕರಿಗೆ ಸಮಸ್ಯೆ ಸೃಷ್ಟಿಸಿದೆ. ಇದರ ಜೊತೆಯಲ್ಲಿ ವೃಂದಬಲ ನಿಗದಿಯಿಂದ ವೇತನ ಶ್ರೇಣಿ ವ್ಯತ್ಯಾಸವಾಗಿ ಶಿಕ್ಷಕರ ಮನೋಸ್ಟೈರ್ಯದ ಮೇಲೆ ಋಣಾತ್ಮಕ ಪರಿಣಾಮವಾದಾಗ್ಯೂ, ಈಗಿನವರೆಗೂ 1 ರಿಂದ 5 ಶಿಕ್ಷಕ ವೃಂದದವರೆಂದು ಪರಿಗಣಿತವಾದ 1 ರಿಂದ 7, 1 ರಿಂದ 8ಕ್ಕೆ ನೇಮಕಾತಿಯಾದ ಶಿಕ್ಷಕರು ಯಾವುದೇ ಆರ್ಥಿಕ ಸೌಲಭ್ಯ ಬಯಸದೇ, 6 ರಿಂದ 8ನೇ ತರಗತಿ ನಿರ್ವಹಣೆ ಹಾಗೂ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಇದೇ ಸಂದರ್ಭದಲ್ಲಿ 6 ರಿಂದ 8ನೇ ತರಗತಿಗೆ ನೇಮಕವಾದ 20110 ಶಿಕ್ಷಕರು ಕೇವಲ 6 ರಿಂದ 8ನೇ ತರಗತಿ ಬೋಧನೆ ಮಾತ್ರ ಮಾಡುತ್ತಿದ್ದು, 1 ರಿಂದ 5ನೇ ತರಗತಿ ಬೋಧನೆಯಲ್ಲಿ ಭಾಗವಹಿಸುತ್ತಿಲ್ಲ. ಆದರೆ 1 ರಿಂದ 7 ಮತ್ತು 1 ರಿಂದ 8ಕ್ಕೆ ನೇಮಕಾತಿಯಾದ ಪ್ರಾಥಮಿಕ ಶಾಲಾ ಸಹ ಶಿಕ್ಷಕರು ಇಲಾಖೆಗೆ ಮುಜುಗರವಾಗದಂತೆ 1 ರಿಂದ 8ನೇ ತರಗತಿವರೆಗಿನ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಸಾಮಾಜಿಕ ನ್ಯಾಯದ ಪರ ಧ್ವನಿಯಾಗಿರುವ ತಾವುಗಳು ಲಕ್ಷಾಂತರ ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಬಹುದೊಡ್ಡ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸಿ, ತುರ್ತಾಗಿ ಒಂದು ಕಾರ್ಯಕಾರಿ ಆದೇಶವನ್ನು ಹೊರಡಿಸಲು ಸರ್ಕಾರವು ಮುಂದಾಗಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರಲ್ಲದೇ ಅರ್ಹ ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಅರ್ಹತೆಯ ಆಧಾರದ ಮೇಲೆ ಪ್ರೌಢ ಶಾಲೆಗೆ ಬಡ್ತಿ ನೀಡಬೇಕು, ಪ್ರಾಥಮಿಕ ಶಾಲಾ ಶಿಕ್ಷಕರಿಗೆ 2016ರ ಪೂರ್ವದಂತೆ ಮುಖ್ಯಗುರುಗಳ ಹಾಗೂ ಹಿರಿಯ ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಠತೆಯ ಆಧಾರದ ಮೇಲೆ ಬಡ್ತಿ ನೀಡಬೇಕೆಂದು ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಮನವಿ ಪತ್ರವನ್ನು ತಹಶಿಲ್ದಾರ ಕಚೇರಿ ಸಿಬ್ಬಂದಿ ಮುನ್ನಾ ಅತ್ತಾರ ಅವರಿಗೆ ಸಂಘದ ಪದಾಧಿಕಾರಿಗಳು ಸಲ್ಲಿಸಿದರು.
ಈ ಸಮಯದಲ್ಲಿ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ, ಉಪಾಧ್ಯಕ್ಷ ಟಿ.ಎಸ್.ಲಮಾಣೆ, ಕಾರ್ಯದರ್ಶಿ ಎಸ್.ಬಿ.ಬಿರಗೊಂಡ, ಎಂ.ಎಲ್.ಚೌದ್ರಿ, ಶ್ರೀಮತಿ ಆರ್.ಬಿ.ಆಲೂರ, ಶ್ರೀಮತಿ ಅಂಬಿಕಾ ಗೋಗಿ, ಶ್ರೀಮತಿ ಎ.ಆರ್.ಹಜೇರಿ, ಎ.ಬಿ.ಗೋನಾಳ, ಎಸ್.ಎಸ್.ತೀರ್ಫ, ಸಿ.ಎಸ್.ಯರಗಲ್ಲ, ಶ್ರೀಮತಿ ಎಸ್.ಬಿ.ಹೂಗಾರ, ಜಿ.ಕೆ.ಪತ್ತಾರ, ಎಸ್.ಎಸ್.ಹಿಪ್ಪರಗಿ, ನಿಂಗನಗೌಡ ದೊಡಮನಿ, ಶಿವರಾಜ ಚೌದ್ರಿ, ಎಸ್.ಆರ್.ವಾಲಿಕಾರ, ಎಸ್.ಎಂ.ಪಾಲ್ಕಿ, ಬಿ.ಎ.ವಿಜಾಪೂರ, ಆರ್.ಎ.ವಿಜಾಪೂರ, ಕೆ.ಬಿ.ಬಿರಾದಾರ, ಶ್ರೀಮತಿ ಎಸ್.ವ್ಹಿ.ಬನ್ನೇಟ್ಟಿ, ಶ್ರೀಮತಿ ಜಿ.ಕೆ.ಮಣೂರ, ಶ್ರೀಮತಿ ಎಸ್.ವಾಯ್.ಜಾಲವಾದಿ, ಮೊದಲಾದವರು ಉಪಸ್ಥಿತರಿದ್ದರು.