ಸೈನಿಕರ ಸೇವೆ, ತ್ಯಾಗ, ಇಂದಿನ ಯುವಪೀಳಿಗೆಗೆ ಆದರ್ಶವಾದುದು
ಇಂಡಿ:ಆ.6: ಸೈನಿಕರು ತಮ್ಮ ಜೀವನವನ್ನೇ ದೇಶಕ್ಕಾಗಿ ಪಣವಿಟ್ಟು ಗಡಿಯನ್ನು ಕಾಯುತ್ತಿರುವುದರಿಂದಲೇ ನಾವಿಂದು ಶಾಂತಿ-ಸಂತೋಷದಿಂದ ಬದುಕಲು ಸಾಧ್ಯವಾಗಿದೆ ಎಂದು ಶಿಕ್ಷಕ ರಮೇಶ ಮುಂಜಣ್ಣಿ ಹೇಳಿದರು.
ಅವರು ತಾಲೂಕಿನ ಬೋಳೆಗಾಂವ ಗ್ರಾಮದಲ್ಲಿ ಹಮ್ಮಿಕೊಂಡ ನಿವೃತ್ತ ಯೋಧ ಸೋಮಶೇಖರ ಕೋಟೆಣ್ಣವರ ಅವರ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಮನೆ, ಕುಟುಂಬ ಸದಸ್ಯರಿಂದ ದೂರವಾಗಿದ್ದುಕೊಂಡು ದೇಶ ರಕ್ಷಣೆಗೆ ಲಕ್ಷಾಂತರ ಯೋಧರು ಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ, ತ್ಯಾಗವನ್ನು ಇಂದಿನ ಯುವಪೀಳಿಗೆ ನೆನೆಯುವಂತಾಗಬೇಕು ಎಂದರು.
ರೈತ ಭೀರಣ್ಣ ಹಳ್ಳಿ ಮಾತನಾಡಿ, ಸೈನಿಕರು ಗಡಿ ರಕ್ಷಣೆಯ ಜೊತೆಗೆ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಸೇವೆ ಸಲ್ಲಿಸುವ ಪರಿ ಶ್ಲಾಘನೀಯ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೋಮಶೇಖರ ಅವರು, ಈಗಿನ ಯುವಕರು ಸೇನೆ ಸೇರಲು ಮುಂದೆ ಬರಬೇಕು. ಸೇನೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಪ್ರಾಣವನ್ನು ಮುಡುಪಾಗಿಟ್ಟು ದೇಶ ಕಾಯುವ ಯೋಧರಿಗೆ ನಮ್ಮ ಜನರು ಋಣಿಯಾಗಿರಬೇಕು. ಜನಸೇವೆಯೇ ದೇಶ ಸೇವೆ ಎಂದು ತಿಳಿದು ಸೇವೆ ಸಲ್ಲಿಸಿದ ತೃಪ್ತಿ ನನಗಿದೆ ಎಂದು ಹೇಳಿದರು.
ಶಿಕ್ಷಕ ಬಸವರಾಜ ಬಿರಾದಾರ ಮಾತನಾಡಿ, ರೈತ ದೇಶಕ್ಕೆ ಅನ್ನ ನೀಡಿದರೆ, ಸೈನಿಕ ನಮ್ಮ ದೇಶ ಸಂತೋಷಕ್ಕೆ ಕಾರಣವಾಗುತ್ತಾನೆ. ರೈತ-ಸೈನಿಕ ನಮ್ಮ ದೇಶದ ಬೆನ್ನೆಲುಬು. ಸುದೀರ್ಘ 20 ವರ್ಷ ಸೋಮಶೇಖರ ಅವರು ಸೈನಿಕರಾಗಿ ಸೇವೆ ಸಲ್ಲಿಸಿದ್ದು ಅನುಪಮವಾಗಿದೆ ಎಂದು ಹೇಳಿದರು.
ಮಾಜಿ ಸೈನಿಕ ಮೃತ್ಯುಂಜಯ ಹಿರೇಮಠ ಗ್ರಾಮದ ಪರವಾಗಿ ಸೋಮಶೇಖರ ಅವರನ್ನು ಸನ್ಮಾನಿಸಿದರು. ಕಾಶಿನಾಥ ಹುಣಸಗಿ ಸ್ವಾಗತಿಸಿದರು.ಶಿಕ್ಷಕ ಪ್ರಶಾಂತ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಹಿರಿಯ ನಾಗರಿಕರಾದ ಶ್ರೀ ಮಲಕಪ್ಪ ಗುಂಜುಟಗಿ,ಎಸ್‍ಡಿಎಂಸಿ ಅಧ್ಯಕ್ಷ ಶಿವಶಂಕರ ಕಪ್ಪೆನವರ,ಸಂಜು ಜಾಲಗೇರಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.