ತೊಗರಿಗೆ ಕುಡಿ ಚಿವುಟುವಿಕೆಯಿಂದ ಇಳುವರಿ ಅಧಿಕವಾಗಲು ಸಾಧ್ಯ
ಕಲಬುರಗಿ : ಆ.6:ಜಿಲ್ಲೆಯ ಪ್ರಮುಖ ಬೆಳೆಯಾದ ತೊಗರಿಯು ಉತ್ತಮವಾಗಿ ಬೆಳವಣಿಗೆಯಾಗುತ್ತಿದ್ದು, ಅದಕ್ಕೆ ಈಗ ಕುಡಿ ಚಿವುಟುವ ಕಾರ್ಯ ಮಾಡಬೇಕು. ಇದು ವೈಜ್ಞಾನಿಕ ಪ್ರಕ್ರಿಯೆಯಾಗಿದ್ದು, ಶೇ.5-10ರಷ್ಟು ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಿದೆ ಎಂದು ನಿವೃತ್ತ ಕೃಷಿ ಅಧಿಕಾರಿ ಶಿವಯೋಗೆಪ್ಪಾ ಎಸ್. ಬಿರಾದಾರ ರೈತರಿಗೆ ಸಲಹೆ ನೀಡಿದರು. ಜೇವರ್ಗಿ ತಾಲೂಕಿನ ಅವರಾದ ಗ್ರಾಮದ ಹೊಲವೊಂದರಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಜರುಗಿದ “ತೊಗರಿ ಬೆಳೆಗಾರ ರೈತರಿಗೆ ಸಲಹೆಗಳು” ಕಾರ್ಯಕ್ರಮದಲ್ಲಿ ತೊಗರಿಯ ಕುಡಿ ಚಿವುಟುವ ವೈಜ್ಞಾನಿಕ ಹಿನ್ನೆಲೆಯನ್ನು ವಿವರಿಸಿದರು. ಮಿಶ್ರ ಬೆಳೆ ಅನುಸರಿಸಬೇಕು. ಮಧ್ಯಂತರ ಬೇಸಾಯ ಕೈಗೊಳ್ಳಬೇಕು. ಕಳೆ ಕೀಳಬೇಕು. ಭೂಮಿಯ ಫಲವತ್ತತೆ ಕಾಪಾಡಿ. ಸಾರವರ್ಧನೆ ಬಲಪಡಿಸಿ. ಜೈವಿಕ ಕೀಟನಾಶಕ ಅಗತ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಡಾ.ವಾಸುದೇವ ಸೇಡಂ ಎಚ್., ಎಚ್.ಬಿ.ಪಾಟೀಲ, ರೇಣುಕಾಚಾರ್ಯ ಸ್ಥಾವರಮಠ, ಧೂಳಪ್ಪ ದ್ಯಾಮನಕರ್, ರಾಜು ಲಕಣಾಪುರ, ಮಲ್ಲು ಅವರಾದ ಸೇರಿದಂತೆ ಇನ್ನಿತರರು ಇದ್ದರು