ಕರ್ನಾಟಕ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ
ಬೀದರ:ಆ.6: ಕರ್ನಾಟಕ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರು ಅತ್ಯುತ್ತಮವಾಗಿ ಫಲಿತಾಂಶ ತೆಗೆದ ಕಾರಣ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ವತಿಯಿಂದ ಪ್ರತೀ ವರ್ಷ ಘಟಿಕೋತ್ಸವದಲ್ಲಿ ಕೊಡಮಾಡಲ್ಪಡುವ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಎಂ.ಎಸ್‍ಸಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಓದುತ್ತಿರುವ ಪ್ರಿಯಾ ಎನಿಮಲ್ ಫಿಸಿಯೋಲಾಜಿ ವಿಷಯದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಕಾರಣ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಬಿ.ಎಸ್‍ಸಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಪೂಜಾ ಚಂದ್ರಪ್ಪ ಅತಿ ಹೆಚ್ಚು ಅಂಕ ಪಡೆದ ಕಾರಣ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಅಲ್ಲದೇ ಬಿಸಿಎನಲ್ಲಿ ಓದುತ್ತಿರುವ ವೈಷ್ಣವಿ ಪಾಟೀಲ ಎಂಬ ವಿದ್ಯಾರ್ಥಿನಿ ವಿಶ್ವವಿದ್ಯಾಲಯಕ್ಕೆ ಐದನೇ ರ್ಯಾಂಕ್ ಪಡೆದ ಕಾರಣ ಅವಳಿಗೂ ಸನ್ಮಾನಿಸಲಾಗುತ್ತಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ 2024ರ ಆಗಸ್ಟ್ ತಿಂಗಳಿನಲ್ಲಿ ಜರುಗುವ 42ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಹಾಗೂ ಸನ್ಮಾನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳ ವಿವರ ತಿಳಿಸುವಂತೆ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯಿಂದ ಕಾಲೇಜಿಗೆ ಪತ್ರ ಬಂದಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕರಾಶಿ ಸಂಸ್ಥೆಯ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕಾರ್ಯದರ್ಶಿ ಸಿದ್ರಾಮ ಪಾರಾ, ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ ಸೇರಿದಂತೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹಾಗೂ ಪ್ರಾಚಾರ್ಯರು ಹಾಗೂ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿದ್ದಾರೆ.