ದೈವಿಗುಣ ಸಾಧಿಸಲು ಪ್ರವಚನ ಸಹಕಾರಿ
ಭಾಲ್ಕಿ:ಆ.6: ವ್ಯಕ್ತಿಯ ಮನದಲ್ಲಿ ದೈವಿಗುಣ ಸಾಧಿಸಲು ಪ್ರವಚನ ಸಹಕಾರಿ ಎಂದು ಬೀದರ್ ರೋಟರಿ ಕ್ಲಬ್ ಅಧ್ಯಕ್ಷ ಸಂಗಮೇಶ ಆಣದೂರೆ ಹೇಳಿದರು. ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಸೋಮವಾರ ಆಯೋಜಿಸಿದ್ದ ಅಲ್ಲಮಪ್ರಭು ದೇವರ ವಚನ ದರ್ಶನ ಪ್ರವಚನ ಮತ್ತು ಗ್ರಂಥಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮಲ್ಲಿನ ಕಾಮ, ಕ್ರೋಧ, ಮದ, ಮತ್ಸರ ಮತ್ತು ದುರ್ಗುಣ ನಿರ್ಮೂಲನೆಗೊಳಿಸಿ ದೇವಮಾನವನ್ನಾಗಿ ಮಾಡುವ ಅದ್ಭುತ ಶಕ್ತಿ ಮಹಾತ್ಮರ, ಪೂಜ್ಯರ ವಾಣಿಯಲ್ಲಿದೆ. ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಪ್ರತಿವರ್ಷದಂತೆ ಈ ಬಾರಿಯು ಪ್ರವಚನ ನಡೆಸಿಕೊಡುತ್ತಿರುವುದು ನಮ್ಮೆಲ್ಲರ ಸುದೈವ.
ಪ್ರತಿಯೊಬ್ಬರೂ ಎಷ್ಟೇ ಒತ್ತಡದಲ್ಲಿದ್ದರೂ ಕೂಡ ಬಿಡುವು ಮಾಡಿಕೊಂಡು ಪಟ್ಟದ್ದೇವರು ತಿಂಗಳ ಪರ್ಯಂತ ನಡೆಸಿಕೊಡುವ ಪ್ರವಚನದ ಮೂಲನ ದಯಪಾಲಿಸುವ ದಿವ್ಯವಾಣಿಯನ್ನು ಆಲಿಸಿ ತಮ್ಮ ಬದುಕು ಸುಂದರವಾಗಿ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ನೇತೃತ್ವ ವಹಿಸಿದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಈ ಭಾಗದಲ್ಲಿ ಕಳೆದ 40ವರ್ಷಗಳಿಂದ ಡಾ.ಬಸವಲಿಂಗ ಪಟ್ಟದ್ದೇವರು ಶ್ರಾವಣ ಮಾಸದ ಸಂದರ್ಭದಲ್ಲಿ ವಿವಿಧ ಮಹಾತ್ಮರ, ಶರಣರ ಸಾಧನೆ, ಚರಿತ್ರೆ ಕುರಿತು ತಿಂಗಳ ಪರ್ಯಂತ ಪ್ರವಚನದ ಮೂಲಕ ಜ್ಞಾನವನ್ನು ಧಾರೆಯೆರುತ್ತಿದ್ದಾರೆ. ಈ ಬಾರಿಯು ಪೂಜ್ಯರು ಅಲ್ಲಮಪ್ರಭು ದೇವರ ವಚನ ದರ್ಶನ ಕುರಿತು ಪ್ರವಚನ ದಯಪಾಲಿಸಲಿದ್ದಾರೆ. ಎಲ್ಲ ಸದ್ಭಕ್ತರು ಆಲಿಸಿ ತಮ್ಮ ಜೀವನದಲ್ಲಿ ಆಚರಣೆಗೆ ತರಬೇಕು ಎಂದು ತಿಳಿಸಿದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‍ನ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದರು. ಶ್ರಾವಣ ಮಾಸ ಸೇವಾ ಸಮಿತಿ ಅಧ್ಯಕ್ಷೆ ನಿರ್ಮಲಾ ಚಂದ್ರಕಾಂತ ಪಾಟೀಲ್ ಅಧ್ಯಕ್ಷತೆ ವಹಿಸಿದರು.
ಹುಮನಾಬಾದ್‍ನ ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಂಭುಲಿಂಗ ಕಾಮಣ್ಣ ಗ್ರಂಥ ಪರಿಚಯ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್, ಕರ್ನಾಟಕ ರಾಜ್ಯ ಕಮ್ಮಾರ ಸಂಘಗಳ ಒಕ್ಕೂಟ ಉಪಾಧ್ಯಕ್ಷ ಜ್ಯೋತಿಬಾ ಕಮ್ಮಾರ, ಪ್ರಧಾನ ಕಾರ್ಯದರ್ಶಿ ಮಂಜಣ್ಣ ಕಮ್ಮಾರ, ಬೆಂಗಳೂರು ಕಮ್ಮಾರ ಸಮಾಜದ ಅಧ್ಯಕ್ಷ ಟಿ.ನಾಗರಾಜು, ಕಲಬುರಗಿ ಸಮಾಜ ಸೇವಕ ಅಪ್ಪಣ್ಣ, ವಿಜಯಪೂರದ ಶಿವಲಿಂಗ ಯರಗಲ್ಲ, ಹಿರಿಯ ಸಾಹಿತಿ ವೀರಣ್ಣ ಕುಂಬಾರ ಸೇರಿದಂತೆ ಹಲವರು ಇದ್ದರು. ದೀಪಕ ಠಮಕೆ ನಿರೂಪಿಸಿದರು.
ಗ್ರಂಥ ಲೋಕಾರ್ಪಣೆ
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಅವರು ಪ್ರವಚನದ ಮೂಲಕ ನಿರಂತರವಾಗಿ ಈ ಭಾಗದ ಭಕ್ತರ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ.ಪ್ರವಚನ ಮನಸ್ಸನ್ನು ಅರಳಿಸುತ್ತದೆ. ಹೀಗಾಗಿ ಪ್ರತಿಯೊಬ್ಬರೂ ಪೂಜ್ಯರು ನಡೆಸಿಕೊಡುವ ಪ್ರವಚನವನ್ನು ಆಲಿಸಿ ಬದುಕು ಸಾರ್ಥಕತೆ ಪಡಿಸಿಕೊಳ್ಳಬೇಕು.