ಭಾರತ ಮಾತಾ ಮಂದಿರದಲ್ಲಿ 100ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭ
ಬೀದರ್: ಆ.6:ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಲಾಡಚಿಂಚೋಳಿ ಹತ್ತಿರದ ಜೈ ಭಾರತ ಮಾತಾ ದೇವಾಲಯದ ಆವರಣದಲ್ಲಿ 100 ಅಡಿ ಎತ್ತರದ ರಾಷ್ಟ್ರಧ್ವಜ ಸ್ತಂಭ ಸ್ಥಾಪಿಸಲಾಗುತ್ತಿದ್ದು, ಶ್ರಾವಣ ಮಾಸದ ಪವಿತ್ರ ಮೊದಲ ಸೋಮವಾರದಂದು ಇದಕ್ಕೆ ಭೂಮಿಪೂಜೆ ನೆರವೇರಿಸಲಾಗಿದೆ.
ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಸದ್ಗುರು ಶ್ರೀ ಹವಾ ಮಲ್ಲಿನಾಥ ಮಹಾರಾಜ(ನಿರಗುಡಿ ಮುತ್ತ್ಯಾ) ಅವರ ಸಾನ್ನಿಧ್ಯದಲ್ಲಿ ಭೂಮಿಪೂಜೆ ನಡೆಯಿತು. ಕಲ್ಯಾಣ ಕರ್ನಾಟಕ ಭಾಗದಲ್ಲಿರುವ ಏಕೈಕ ಭಾರತ ಮಾತಾ ಮಂದಿರವು ಇದಾಗಿದ್ದು, ಶ್ರೀ ಹವಾ ಮಲ್ಲಿನಾಥ ಮಹಾರಾಜರ ಸತ್ಸಂಕಲ್ಪದಂತೆ ನಿರ್ಮಾಣವಾಗಿದೆ. ಇಲ್ಲಿ ನಿರಂತರ ರಾಷ್ಟ್ರ ಧ್ವಜ ರಾರಾಜಿಸಬೇಕು ಎಂಬ ನಿಟ್ಟಿನಲ್ಲಿ 100 ಅಡಿ ಎತ್ತರದ ಬೃಹತ್ ರಾಷ್ಟ್ರಧ್ವಜ ಸ್ತಂಭ ನಿರ್ಮಿಸಲಾಗುತ್ತಿದೆ.
ಬೀದರ್-ಕಲಬುರಗಿ-ಯಾದಗಿರಿ ಹಾಲು ಒಕ್ಕೂಟ ಅಧ್ಯಕ್ಷರಾದ ಯುವ ಮುಖಂಡ ಆರ್.ಕೆ.ಪಾಟೀಲ್ ಅವರು ರಾಷ್ಟ್ರಧ್ವಜ ಸ್ತಂಭ ಕಾಮಗಾರಿ ಭೂಮಿಪೂಜೆ ಮಾಡಿ, ಬರುವ ಆಗಸ್ಟ್ 15ರೊಳಗೆ ಈ ಸ್ತಂಭ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಶ್ರೀ ಹವಾ ಮಲ್ಲಿನಾಥ ಮಹಾರಾಜ ಅವರ ರಾಷ್ಟ್ರಸೇವೆ ಅವಿಸ್ಮರಣೀಯ. ಜನರಲ್ಲಿ ದೇಶಭಕ್ತಿ ಮೂಡಿಸಲು ದೇಶಾದ್ಯಂತ ಸಂಚರಿಸುತ್ತ ವಿವಿಧ ಕಾರ್ಯಕ್ರಮ ನಡೆಸುತ್ತಿರುವುದು ಮಾದರಿಯಾಗಿದೆ ಎಂದು ಬಣ್ಣಿಸಿದರು.
ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ವಕ್ತಾರ ವೈಜಿನಾಥ ಝಳಕಿ ಅವರು ಮಾತನಾಡಿ, ಇಲ್ಲಿ ಬೃಹತ್ ತಿರಂಗಾ ನಿರಂತರ ಹಾರಬೇಕು. ಈ ಮಂದಿರವು ಸರ್ವಧರ್ಮ ಸಮಭಾವದ ಕೇಂದ್ರ ಹಾಗೂ ದೇಶಾಭಿಮಾನ ಮೂಡಿಸುವ ಪುಣ್ಯ ಸ್ಥಳವಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡುವ ತಾಣವಾಗುವ ನಿಟ್ಟಿನಲ್ಲಿ ಪೂಜ್ಯರು ಶ್ರಮಿಸುತ್ತಿದ್ದಾರೆ. ಮುಖಂಡರಾದ ಆರ್.ಕೆ.ಪಾಟೀಲ್ ಅವರು ಇಲ್ಲಿನ ರಾಷ್ಟ್ರಧ್ವಜ ಸ್ತಂಭದ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ಹೊತ್ತಿರುವುದು ಸಂತಸ ತಂದಿದೆ ಎಂದರು.
ಪ್ರಮುಖರಾದ ಶಹಾಜಿರಾವ ಪಾಟೀಲ್, ಮಲ್ಲಿಕಾರ್ಜುನ ಸಾರವಾಡ, ಲಿಂಗರಾಜ ಪಾಟೀಲ್, ಶಂಕರಗೌಡ, ಕೃಷ್ಣಾ, ಚಂದ್ರಕಾಂತ ಪಾಟೀಲ್ ಇತರರಿದ್ದರು.