ನಿವೃತ್ತ ವಾರ್ತಾಧಿಕಾರಿಗೆ ಕರ್ನಾಟಕ ಸಾಂಸ್ಕøತಿಕ ರತ್ನ ಪ್ರಶಸ್ತಿ
ಬೀದರ, ಆ.06-ವಿಶ್ವ ಕನ್ನಡಿಗರ ಸಂಸ್ಥೆಯು ಕೊಡಮಾಡುವ ರಾಜ್ಯ ಮಟ್ಟದ ಕರ್ನಾಟಕ ಸಾಂಸ್ಕøತಿಕ ರತ್ನ ಪ್ರಶಸ್ತಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಚಂದ್ರಕಾಂತ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸ್ಥೆಯ ರಾಜ್ಯಾಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಅವರು ತಿಳಿಸಿದ್ದಾರೆ.
ಜಿ.ಚಂದ್ರಕಾಂತ ಅವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಗೋರಚಿಂಚೋಳಿ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ್ದಾರೆ. ತಮ್ಮ ಬಾಲ್ಯದಿಂದಲೇ ತಂದೆಯೊಂದಿಗೆ ಭಜನೆಯಲ್ಲಿ ಭಾಗವಹಿಸುತ್ತಿದ್ದರಲ್ಲದೆ, “ಸೌಭಾಗ್ಯ ಲಕ್ಷ್ಮೀ” ಸಾಮಾಜಿಕ ನಾಟಕದಲ್ಲಿ ಬಾಲನಟನಾಗಿ ಸಹ ನಟನೆ ಮಾಡಿದ್ದಾರೆ. ತಮ್ಮ ಶಿಕ್ಷಣ ಪೂರೈಸಿದ ಬಳಿಕ ವಾರ್ತಾಧಿಕಾರಿಯಾಗಿ ಬೀದರ, ಕಲಬುರಗಿ, ಬಳ್ಳಾರಿ, ಚಿತ್ರದುರ್ಗ, ಮೈಸೂರು ಜಿಲ್ಲೆಗಳಲ್ಲಿ ಮತ್ತು ಬೆಂಗಳೂರಿನಲ್ಲಿ ಉತ್ತಮ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ್ದಾರೆ.
ಸರ್ಕಾರಿ ಸೇವೆಯಲ್ಲಿರುವಾಗ ರಾಜ್ಯ ಸರ್ಕಾರದಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ಜಿಲ್ಲಾ ಮಟ್ಟದ ಅತ್ಯುತ್ತಮ ನಾಗರಿಕ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಧಾರವಾಡ ಆಕಾಶವಾಣಿಯಿಂದ ಬೆಳಿಗ್ಗೆ ಬಿತ್ತರಗೊಳ್ಳುವ ಪ್ರಾದೇಶಿಕ ವಾರ್ತೆಗಳ ಅತ್ಯುತ್ತಮ ವರದಿಗಾರ ಪ್ರಶಂಸನೆಗೆ ಪಾತ್ರರಾಗಿದ್ದಾರೆ. ಕಲಬುರಗಿಯ ಗಡಿನಾಡ ಸಂಗೀತ ಸೇವಾ ಸಂಸ್ಥೆಯು ಇವರ ಬಹುಭಾಷಾ ವಚನ ಗಾಯನದ ವಿಶೇಷತೆಯನ್ನು ಪರಿಗಣಿಸಿ ಗಡಿನಾಡ ಕಲಾರತ್ನ ಪ್ರಶಸ್ತಿ ಮತ್ತು ವಿಶ್ವ ಕನ್ನಡಿಗರ ಸಂಸ್ಥೆಯು ಕರ್ನಾಟಕ ರಾಜ್ಯೋತ್ಸವ ರತ್ನ ಪ್ರಶಸ್ತಿ ನೀಡಿ ಗೌರವಿಸಿವೆಯಲ್ಲದೆ ಅನೇಕ ಸಂಘ ಸಂಸ್ಥೆಗಳು ಸಹ ಇವರನ್ನು ಸನ್ಮಾನಿಸಿವೆ.
ರಾಜ್ಯ ಮಟ್ಟದ ರಂಗೋತ್ಸವದಲ್ಲಿ ರಂಗಗೀತೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕಲ್ಯಾಣ ಕರ್ನಾಟಕ ಉತ್ಸವದಲ್ಲಿ, ಪಂಡಿತ ಪಂಚಾಕ್ಷರಿ ಗವಾಯಿಗಳ ಮತು ಪಂಡಿತ ಪುಟ್ಟರಾಜ ಗವಾಯಿಗಳ ಪುಣ್ಯ ಸ್ಮರಣೋತ್ಸವದಲ್ಲಿ ವಚನ ಗಾಯನ, ಪುರಂದರ ಆರಾಧನಾ ಮಹೋತ್ಸವದಲ್ಲಿ ದಾಸರ ಪದಗಳ ಗಾಯನ, ವಿಶ್ವ ವಿಖ್ಯಾತ ಮೈಸೂರು ದಸರಾ ಸೇರಿದಂತೆ ರಾಜ್ಯಾದ್ಯಂತ ಆಯೋಜಿಸಲಾದ ಪ್ರಮುಖ ಉತ್ಸವಗಳಲ್ಲಿ ಗಜಲ್ ಗಾಯನ ಮತ್ತು ಬಸವಣ್ಣನವರ ವಚನಗಳನ್ನು ಬಹುಭಾಷೆಗಳಲ್ಲಿ ಗಾಯನ ಮಾಡಿರುವರು. ಕೃಷಿ, ತೋಟಗಾರಿಕೆ, ರೇಷ್ಮೆ ವ್ಯವಸಾಯದಲ್ಲಿ ಗಣನೀಯ ಸಾಧನೆಗೈದ ರೈತರ ಯಶೋಗಾಥೆ, ಹಬ್ಬ ಹರಿದಿನಗಳ ವಿಶೇಷತೆಯನ್ನು ಸಾರುವ ಲೇಖನಗಳು ಬಹುಭಾಷಾ ಪತ್ರಿಕೆಗಳಲ್ಲಿ ಪ್ರಕಟವಾಗಿರುತ್ತವೆ. ಇವರ ಸಾಂಸ್ಕøತಿಕ ಕ್ಷೇತ್ರದ ಈ ವಿಶೇಷ ಸಾಧನೆಯನ್ನು ಪರಿಗಣಿಸಿ ಕರ್ನಾಟಕ ಸಾಂಸ್ಕøತಿಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಬೀದರ ನಗರದ ಪೂಜ್ಯ ಡಾ. ಚೆನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ವಿಶ್ವ ಕನ್ನಡಿಗರ ಸಂಸ್ಥೆಯು ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಬರುವ ಆಗಸ್ಟ್ 11ರಂದು ಭಾನುವಾರ ಬೆಳಿಗ್ಗೆ 11.30 ಗಂಟೆಗೆ ಆಯೋಜಿಸಲಾದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಎಂದು ಸುಬ್ಬಣ್ಣ ಕರಕನಳ್ಳಿ ಅವರು ತಿಳಿಸಿದ್ದಾರೆ.