ಬಡದಾಳ ಮಠದ ಶಾಲೆಯಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರ ಸಿಗುತ್ತಿದೆ: ಅರುಣಕುಮಾರ ಪಾಟೀಲ್
ಅಫಜಲಪುರ:ಆ.6: ಮಠ ಮಾನ್ಯಗಳು ಕೇವಲ ಧಾರ್ಮಿಕ ತಾಣಗಳಾಗಿರದೆ ಮಠದಡಿಯಲ್ಲಿ ಶಿಕ್ಷಣವನ್ನು ಸಹ ನೀಡುವ ಕೆಲಸ ಮಾಡುತ್ತಿವೆ. ಆದರೆ ಈ ಪೈಕಿ ತಾಲೂಕಿನ ಬಡದಾಳ ಮಠದ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುತ್ತಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಕೆಪಿಸಿಸಿ ಸದಸ್ಯ ಅರುಣಕುಮಾರ ಎಂ.ವೈ ಪಾಟೀಲ್ ಹೇಳಿದರು.
ತಾಲೂಕಿನ ಬಡದಾಳ ಗ್ರಾಮದ ಚನ್ನಮಲ್ಲೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ನಡೆದ 3ನೇ ವರ್ಷದ ಮಾತೃಪಿತೃ ವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರಿಂದ ನಮಗೆ ಬಾಲ್ಯದಲ್ಲಿ ತಂದೆ, ತಾಯಿಯ ಪಾದ ಪೂಜೆ ಮಾಡಿ ಗೌರವಿಸುವ ಅವಕಾಶ ಸಿಗಲಿಲ್ಲ. ಬಡದಾಳ ಮಠದ ಶಾಲೆಯಲ್ಲಿ ಶಿಕ್ಷಣದೊಂದಿಗೆ ಸಂಸ್ಕಾರವು ಸಿಗಬೇಕೆನ್ನುವ ಪೂಜ್ಯರ ಕಲ್ಪನೆಯಂತೆ ಪ್ರತಿವರ್ಷ ಮಾತೃಪಿತೃವಂದನಾ ಕಾರ್ಯಕ್ರಮ ಮಾಡುವ ಮೂಲಕ ತಂದೆ ತಾಯಿಯರನ್ನು ಪೂಜ್ಯ ಭಾವನೆಯಿಂದ ಕಾಣುವಂತೆ ಮಕ್ಕಳಲ್ಲಿ ಮನನ ಮಾಡಿಸುತ್ತಿರುವುದು ನೋಡಿದಾಗ ಮನಸ್ಸಿಗೆ ಬಹಳ ಆನಂದ ಎನಿಸುತ್ತದೆ ಎಂದು ಭಾವುಕರಾದರು.
ಇನ್ನೂ ಬಡದಾಳ ಮಠ, ಶಾಲೆ, ಊರು ಎಲ್ಲವು ನನಗೆ ಸ್ವಂತ ತವರಿದ್ದಂತೆ ಹೀಗಾಗಿ ಈ ಊರಿನ ಸವಾರ್ಂಗೀಣ ಅಭಿವೃದ್ದಿಗೆ ನಾವು ಬದ್ದರಾಗಿದ್ದೇವೆ. ಗ್ರಾಮಸ್ಥರು ಯಾವುದೇ ಸಮಸ್ಯೆ ಇದ್ದರೂ ನನಗೆ ನೇರವಾಗಿ ಸಂಪರ್ಕಿಸಿದರೆ ಅವುಗಳಿಗೆ ಪರಿಹಾರ ಕಲ್ಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಡಾ. ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ನಾವು ಮಕ್ಕಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಬೇಕಾಗಿದೆ. ಇಂದಿನ ಮಕ್ಕಳು ನಾಳಿನ ಜವಾಬ್ದಾರಿಯುತ ನಾಗರಿಕರಾಗಲಿದ್ದಾರೆ. ಹೀಗಾಗಿ ಅವರನ್ನು ಸಮರ್ಥವಾಗಿ ಬೆಳೆಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹೀಗಾಗಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವುದು ಬಹಳ ಅವಶ್ಯಕವಾಗಿದೆ. ಹೀಗಾಗಿ ನಮ್ಮ ಶಾಲೆಯಲ್ಲಿ ಪ್ರತಿವರ್ಷ ಮಾತೃಪಿತೃ ವಂದನಾ ಕಾರ್ಯಕ್ರಮ ಆಯೋಜಿಸುವ ಮೂಲಕ ಮಕ್ಕಳಲ್ಲಿ ಪಾಲಕರ ಮೇಲಿನ ಗೌರವ ಹೆಚ್ಚಿಸಲಾಗುತ್ತಿದೆ ಎಂದ ಅವರು ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ವಿದ್ಯೆ, ವಿವೇಕದ ಜೊತೆಗೆ ಸಂಸ್ಕಾರ ಕಲಿಸುವ ಕೆಲಸ ನಡೆಯುತ್ತಿರುವುದು ಖುಷಿ ತಂದಿದೆ. ಇನ್ನು ಮುಂದೆ ನಮ್ಮ ಶಾಲೆಯ ಎಲ್ಲಾ ಮಕ್ಕಳು ನಿತ್ಯ ಶಾಲೆಗೆ ಬರುವ ಮುನ್ನ ಪಾಲಕರಿಗೆ ನಮಸ್ಕರಿಸಿ ಬನ್ನಿ ಎಂದು ಕರೆ ನೀಡಿದರು.
ಮಾದನ ಹಿಪ್ಪರಗಿ ವಿರಕ್ತ ಮಠದ ಅಭಿನವ ಶಿವಲಿಂಗೇಶ್ವರ ಮಹಾಸ್ವಾಮಿಗಳು, ನೀಲೂರಿನ ವೇ. ಶರಣಯ್ಯ ಸ್ವಾಮಿಗಳು, ಶಿಕ್ಷಣ ಇಲಾಖೆ ಅಧಿಕಾರಿ ಮಾರುತಿ ಮಾತನಾಡಿ ಡಾ. ಅಭಿನವ ಚನ್ನಮಲ್ಲ ಶಿವಾಚಾರ್ಯರು ಆಧ್ಯಾತ್ಮ, ಅಕ್ಷರದ ಜೊತೆಗೆ ಸಂಸ್ಕಾರವನ್ನು ಮಕ್ಕಳಿಗೆ ಕಲಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಈ ಸಂದರ್ಭದಲ್ಲಿ ವೇ.ಗುರುಸ್ವಾಮಿ ಶರಣರು ಕುಳೆಕುಮಟಗಿ, ಚಿಂಚೋಳಿಯ ಮಲ್ಲಿಕಾರ್ಜುನ ಗದ್ದುಗೇಶ್ವರ ಶಿವಾಚಾರ್ಯರು, ಬಡದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರತ್ನಶೀಲ, ಪ್ರಮುಖರಾದ ಸಿದ್ದಾರ್ಥ ಬಸರಿಗಿಡ, ಶಿವಾನಂದ ಚಿಂಚೋಳಿ, ಪಿಡಿಒ ಪ್ರಶಾಂತ ನಂದಿ, ಕಾರ್ಯದರ್ಶಿ ಭೀಮರಾಯ ಜಮಾದಾರ, ಸೇರಿದಂತೆ ಕಾಲೇಜಿನ ಆಡಳಿತ ಮಂಡಳಿ, ಪಾಲಕರು ಇದ್ದರು.