ಸ್ವಾತಂತ್ರ್ಯೋತ್ಸವ ಆಚರಣೆಗೆ ಜಿಲ್ಲಾಡಳಿತದಿಂದ ಸಿದ್ದತೆ
ಬಾಗಲಕೋಟೆ: ಆ6 : ಜಿಲ್ಲೆಯಲ್ಲಿ ಆಗಸ್ಟ 15 ರಂದು ಜರುಗಲಿರುವ ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಸ್ವಾತಂತ್ರೋತವ ದಿನಾಚರಣೆ ಕುರಿತ ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮದಿಂದ ಆಚರಿಸುವ ನಿಟ್ಟಿನಲ್ಲಿ ರಚಿಸಲಾದ ವಿವಿಧ ಸಮಿತಿಗಳ ಸಿದ್ದತೆ ಕುರಿತು ಚರ್ಚಿಸಿದರು. ಯಾವುದೇ ರೀತಿಯ ಅಡೆತಡೆಯಾಗದಂತೆ ಎಲ್ಲ ರೀತಿ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಧ್ವಜ ಬಳಕೆ ನಿಷೇಧವಿದ್ದರೂ ಸಹ ಮಾರಾಟವಾಗುತ್ತಿರುವುದು ಕಂಡುಬರುತ್ತಿದೆ. ಅಂಗಡಿಗಳಲ್ಲಿ ಮಾರಾಟವಾಗದಂತೆ ನಗರಸಭೆ ನಿಗಾವಹಿಸಲು ತಿಳಿಸಿದ ಜಿಲ್ಲಾಧಿಕಾರಿಗಳು ಸುತ್ತೋಲೆ ಹೊರಡಿಸುವಂತೆ ಶಾಲಾ ಶಿಕ್ಷಣ ಇಲಾಖೆಗೆ ಸೂಚಿಸಿದರು.
ಆಗಸ್ಟ 15 ರಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಜಹಣ ನೆರವೇರಲಿದ್ದು, ಪೋಲಿಸ್, ಗೃಹರಕ್ಷಕದಳ, ಎನ್‍ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಮಾಜಿ ಸೈನಿಕರ ತಂಡ ಒಳಗೊಂಡಂತೆ ಆಕರ್ಷಕ ಪಥಸಂಚಲನ ಹಮ್ಮಿಕೊಳ್ಳಲಾಗುತ್ತಿದೆ. ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆ ಮುದ್ರಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ, ದೇಶಭಕ್ತಿ ಗೀತೆ ಹಾಡಿಸಲು ತಂಡಗಳನ್ನು ಆಯ್ಕೆ ಮಾಡಲು ತಿಳಿಸಿದರು.
ಕಾರ್ಯಕ್ರಮ ಯಶಸ್ವಿಗೊಳಿಸಲು ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಸಮಿತಿಗೆ ವಹಿಸಿದ ಜವಾಬ್ದಾರಿಯನ್ನು ತಪ್ಪದೇ ಪಾಲಿಸಬೇಕು. ಶಿಷ್ಟಾಚಾರಕ್ಕೆ ಲೋಪವಾಗದಂತೆ ಧ್ವಜ ಸಂಹಿತೆಗೆ ಯಾವುದೇ ತರಹ ಅಪಚಾರವಾಗದಂತೆ ನೋಡಿಕೊಳ್ಳಲು ಸೂಚಿಸಿದ ಅವರು ಧ್ವಜಾರೋಹಣ ವ್ಯವಸ್ಥೆ ಮಾಡಲು ಭಾರತ ಸೇವಾದಳ, ಪೋಲಿಸ್ ಇಲಾಖೆ, ತಹಶೀಲ್ದಾರ ಹಾಗೂ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿಗಳಿಗೆ ವಹಿಸಿದರೆ, ಬಂದೂಬಸ್ತಿ ವ್ಯವಸ್ಥೆಗೆ ಪೋಲಿಸ್ ಇಲಾಖೆಗೆ ತಿಳಿಸಲಾಯಿತು. ಜಿಲ್ಲಾ ಕ್ರೀಡಾಂಗಣ ಸ್ವಚ್ಛತೆಗೆ ನಗರಸಭೆಗೆ ಸೂಚಿಸಲಾಯಿತು.
ಕ್ರೀಡಾಂಗಣದಲ್ಲಿ ಸ್ಟೇಜ್ ನಿರ್ಮಾಣ, ಗಣ್ಯರಿಗೆ, ಶಾಸಕರಿಗೆ, ಸಂಸದರುಗಳಿಗೆ ಹಾಗೂ ಸನ್ಮಾನಿತರಿಗೆ, ಪತ್ರಕರ್ತರಿಗೆ ಸೂಕ್ತ ಆಸನಗಳ ವ್ಯವಸ್ಥೆ ಕಲ್ಪಿಸಬೇಕು. ಧ್ವನಿವರ್ಧಕ ಹಾಗೂ ಜನರೇಟರ್ ವ್ಯವಸ್ಥೆ ಕೈಗೊಳ್ಳಲು ಸೂಚಿಸಿದರು. ಕುಡಿಯುವ ನೀರಿನ ವ್ಯವಸ್ಥೆ, ಶಾಲಾ ಮಕ್ಕಳಿಗೆ ಸಹಿ ವಿತರಣೆ ಕ್ರಮವಹಿಸಬೇಕು. ವೇದಿಕೆ ಮೇಲೆ ಗಣ್ಯವ್ಯಕ್ತಿಗಳಿಗೆ ಆಸನಗಳ ವ್ಯವಸ್ಥೆ ಹಾಗೂ ವೇದಿಕೆಯ ಎರಡು ಕಡೆಗಳಲ್ಲಿ ಅಧಿಕಾರಿಗಳಿಗೆ, ಸನ್ಮಾನಿತರಿಗೆ ಹಾಗೂ ಪತ್ರಕರ್ತರಿಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಬೇಕು. ಜಿಲ್ಲಾಡಳಿತ ಭವನ ಸೇರಿದಂತೆ ತಾಲೂಕ ಆಡಳಿತ ಭವನ, ಜಿಲ್ಲಾ ಕ್ರೀಡಾಂಗಣಕ್ಕೂ ವಿದ್ಯುತ್ ಅಲಂಕಾರ ಮಾಡುವಂತೆ ಸೂಚಿಸಲಾಯಿತು.
ಸಭೆಯಲ್ಲಿ ಜಿ.ಪಂ ಸಿಇಓ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಯೋಜನಾ ನಿರ್ದೇಶಕ ಎನ್.ವಾಯ್.ಬಸರಿಗಿಡದ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಲೋಕೋಪಯೋಗಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಕಡಿವಾಲರ, ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಚೊಳಚಗುಡ್ಡ, ತಹಶೀಲ್ದಾರ ಅಮರೇಶ ಪಮ್ಮಾರ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.