ಸಾಧನೆಗಳ ಬಗ್ಗೆ ಮಕ್ಕಳಲ್ಲಿ ಅರಿವು, ಹೆಮ್ಮೆ ಮೂಡಿಸುವುದು ನಮ್ಮ ಜವಾಬ್ದಾರಿ
ಧಾರವಾಡ,ಆ6: ಸ್ವಾತಂತ್ರ್ಯೋತ್ಸವದ ಸಂಭ್ರಮಾಚರಣೆಯಲ್ಲಿ ನಮ್ಮ ರಾಷ್ಟ್ರದ ಐತಿಹಾಸಿಕ ಹೋರಾಟ ಮತ್ತು ಸಾಧನೆಗಳ ಬಗ್ಗೆ ಮಕ್ಕಳಲ್ಲಿ ಅರಿವು, ಹೆಮ್ಮೆ ಮೂಡಿಸುವುದು ನಮ್ಮ ಜವಾಬ್ದಾರಿ ಆಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸ್ಮಾರಕಗಳ ಛಾಯಾಚಿತ್ರ ಪ್ರದರ್ಶನವೂ ಅದರಲ್ಲಿ ಒಂದಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ನಗರದ ಆರ್ಟಗ್ಯಾಲರಿಯಲ್ಲಿ ಕೇಂದ್ರ ಪುರಾತತ್ವ ಇಲಾಖೆ ಹಾಗೂ ಜಿಲ್ಲಾಡಳಿತ ಆಯೋಜಿಸಿರುವ ಉತ್ತರ ಕರ್ನಾಟಕ ವಾಸ್ತುಶಿಲ್ಪ ಪರಂಪರೆ ಹಾಗೂ ಸ್ಮಾರಕಗಳು ಅಂದು ಮತ್ತು ಇಂದು ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ವಾತಂತ್ರ್ಯದ ಬಗ್ಗೆ ಅಭಿಮಾನ, ಹೆಮ್ಮೆ ಬರುವಂತೆ ಮಕ್ಕಳನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಧಾರವಾಡ ಜಿಲ್ಲಾಡಳಿತದಿಂದ ವಿಭಿನ್ನವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ನಮ್ಮ ಪರಂಪರೆ, ಸಂಸ್ಕøತಿಗಳ ಅರಿವು ಇದ್ದಾಗ ಮಾತ್ರ ಮಕ್ಕಳಲ್ಲಿ ದೇಶ ಪ್ರೇಮ ಬೆಳೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಈ ವರ್ಷದ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಧಾರವಾಡ ಜಿಲ್ಲೆಯ ಹೊರಾಟಗಾರರ ಬಗ್ಗೆ, ಹೋರಾಟಗಳ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ 77 ಪಿಯು ಕಾಲೇಜುಗಳಲ್ಲಿ ಧಾರವಾಡ ಜಿಲ್ಲೆಯ ಐತಿಹಾಸಿಕತೆ ಕುರಿತು ಸರಣಿ ಉಪನ್ಯಾಸ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ವಿಶ್ವವಿದ್ಯಾಲಯ ಮಟ್ಟದ ವಿಚಾರ ಸಂಕಿರಣ, ರಾಜ್ಯ ಪುರಾತತ್ವ ಇಲಾಖೆಯಿಂದ ಐತಿಹಾಸಿಕ ದಾಖಲೆಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ನಮ್ಮಲ್ಲಿ ಇತಿಹಾಸದ ತಿಳುವಳಿಕೆ ಇದ್ದರೆ ಮಾತ್ರ, ದೇಶದ ಭವಿಷ್ಯ ರೂಪಿಸುವಲ್ಲಿ ನಮ್ಮ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಮಕ್ಕಳಲ್ಲಿ ಇತಿಹಾಸ ಪ್ರಜ್ಞೆ ಬೆಳೆಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ ವಲಯ ಅಧೀಕ್ಷಕ ಪುರಾತತ್ವ ಅಧಿಕಾರಿ ಡಾ.ರೇಷ್ಮಾ ಸಾವಂತ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಅಧೀಕ್ಷಕ ಪುರಾತತ್ವ ಅಧಿಕಾರಿ ಶ್ರೀಗುರು ಬಾಗಿ ವಂದಿಸಿದರು. ಸಹಾಯಕ ಅಧೀಕ್ಷಕ ಪುರಾತತ್ವ ಅಧಿಕಾರಿ ಡಾ. ದೇವರಾಜು ಸಾರಂಗಮಠ ಕಾರ್ಯಕ್ರಮ ನಿರೂಪಿಸಿ, ಛಾಯಾಚಿತ್ರಗಳನ್ನು ವಿದ್ಯಾರ್ಥಿಗಳಿಗೆ, ಅಥಿತಿಗಳಿಗೆ ವಿವರಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸುಧಾರಣೆ ಇಲಾಖೆ ಉಪ ನಿರ್ದೇಶಕ ಎಸ್.ಎಸ್.ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ, ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಸವರಾಜ ಕುರಿಯವರ, ಉಪನ್ಯಾಸಕರಾದ ಎಸ್.ಕೆ.ಪತ್ತಾರ, ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀದೇವಿ ಲದ್ದಿಮಠ, ಡಾ.ಗಾಯತ್ರಿ ಜೋಶಿ, ಶಿಕ್ಷಕರಾದ ಎಂ.ಜಿ. ಹಿರೇಮಠ, ಅರ್ಜುನ ಲಮಾಣಿ ಹಾಗೂ ಸಾರ್ವಜನಿಕರು, ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.