ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನೆ ರಾಜ್ಯಕ್ಕೆ ಹೆಮ್ಮೆ
ಬಾದಾಮಿ,ಆ6: ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನೆ ಇದು ರಾಜ್ಯದ ಹೆಮ್ಮೆಯ ವಿಷಯ. 65 ವರ್ಷಗಳ ಹಿಂದೆಯೇ ಸಂಸ್ಥೆಯ ಸಂಸ್ಥಾಪಕರು ವೀರಪುಲಿಕೇಶಿ ಎಂದು ನಾಮವಿರಿಸಿ ಪುಲಿಕೇಶಿ ಹೆಸರಲ್ಲಿ ಶಿಕ್ಷಣದ ದಾಸೋಹ ಮಾಡುತ್ತಿರುವುದು ಶ್ಲ್ಯಾಘನೀಯ. ಅವರ ದೂರದೃಷ್ಟಿಗೆ ನನ್ನ ನಮನ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಇಲ್ಲಿಯ ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಬಸವ ಮಂಟಪದಲ್ಲಿ ಎಸ್‍ಬಿಎಂ ಪದವಿ ಕಾಲೇಜು ಆವರಣದಲ್ಲಿ ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಠಾಪನಾ ಸಮಾರಂಭದಲ್ಲಿ ಮಾತನಾಡಿದ ಅವರು ಇಮ್ಮಡಿ ಪುಲಕೇಶಿ ಮೂರ್ತಿ ಪ್ರತಿಷ್ಟಾಪನೆ ಆಗಬೇಕು ಎಂಬುದು ಈ ನಾಡಿನ ಜನರ ಬೇಡಿಕೆಯಾಗಿತ್ತು. ಸಧ್ಯ ಸಂಸ್ಥೆಯ ಆವರಣದಲ್ಲಿ ಆಗಿದೆ. ಚಾಲುಕ್ಯರ ನಾಡು ಬಾದಾಮಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಶ್ವ ಮಾನ್ಯತೆ ಪಡೆದಿದೆ. ನಮ್ಮ ಪೂರ್ವಜರ ಬಗ್ಗೆ ನಮಗೆ ಹೆಮ್ಮೆ ಇರಬೇಕು. ನಗರದಲ್ಲಿ ಪುಲಿಕೇಶಿ ಮತ್ತು ಬಸವಣ್ಣ ಮೂರ್ತಿಗಳ ಪ್ರತಿಷ್ಟಾಪನೆ ಸಾರ್ವಜನಿಕವಾಗಿ ಒತ್ತಾಯವಿದೆ ಎಂದ ಅವರು ಬಾದಾಮಿ ಚಾಲುಕ್ಯರ ನಾಡಿಗೆ ಶಾಸಕರಿದ್ದ ಸಿದ್ದರಾಮಯ್ಯ ಅವರು ಅಭಿವೃದ್ಧಿ ಮಾಡಿದರು ಎಂದುಕೊಂಡಿದ್ದೆ ಆದರೆ ಅಭಿವೃದ್ಧಿ ಅಲ್ಲ ನಾಡಿನ ದೊರೆಯ ಮೂರ್ತಿ ಪ್ರತಿಷ್ಟಾಪನೆಯೂ ಆಗಲಿಲ್ಲ ಎಂಬುದು ವಿಪರ್ಯಾಸ ಎಂದರು.
ಹೊಳೆಹುಚ್ಚೇಶ್ವರ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ ಇತಿಹಾಸ ಬಲ್ಲವ ಇತಿಹಾಸ ಸೃಷ್ಟಿಬಲ್ಲ. ಯೋಗ ಮತ್ತು ಯೋಗ್ಯತೆಯಿಂದ ನಿರ್ಮಿತ ಪುಲಿಕೇಶಿ ಮೂರ್ತಿ ಇಂದು ಪುಲಿಕೇಶಿ ಸಂಸ್ಥೆಯಲ್ಲಿಯೇ ಪ್ರತಿಷ್ಟಾಪಣೆಗೊಂಡಿದ್ದು ಇತಿಹಾಸ ಎಂದರು.
ನಿವೃತ್ತ ಪ್ರಾಧ್ಯಾಪಕ ಡಾ. ಈರಣ್ಣ ಪತ್ತಾರ ಪುಲಿಕೇಶಿ ಜೀವನ ಚರಿತ್ರೆ ಕುರಿತು ಹಾಗೂ ಪ್ರಾಚಾರ್ಯ ರವೀಂದ್ರ ಮೂಲಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಪಿಕಾರ್ಡ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ.ಪಾಟೀಲ, ಎಸ್.ಜಿ.ಕಾರುಡಗಿಮಠ, ಶ್ರೀಧರ ಪತ್ತೇಪೂರ, ನಾಗರಾಜ ಕಾಚೆಟ್ಟಿ ಉಪಸ್ಥಿತರಿದ್ದರು.