ಹುಲ್ಲು ಕೊಯ್ಯವ ಜಗಳಕ್ಕೆ ಯುವಕ ಬರ್ಬರ ಕೊಲೆ
ಬೆಂಗಳೂರು,ಆ.೬-ಜಮೀನಿನಲ್ಲಿ ಹುಲ್ಲು ಕೊಯ್ಯುವ ವಿಚಾರವಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಸಂಬಂಧಿಕರೇ ಯುವಕನನ್ನು ಬರ್ಬರವಾಗಿ ಕೊಲೆಗೈದು,ಶವವನ್ನು ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿ ಗ್ರಾಮದ ರಸ್ತೆ ಬದಿ ಎಸೆದು ಪೊಲೀಸರಿಗೆ ಶರಣಾಗಿದ್ದಾರೆ.
ಖಾಸಗಿ ಶಾಲೆಯ ವಾಹನ ಚಾಲಕನಾಗಿ ಕೆಲ ಮಾಡುತ್ತಿದ್ದ ರಂಜಿತ್ ಕುಮಾರ್ (೨೯) ಕೊಲೆಯಾದವರು,ಆತನ ಚಿಕ್ಕಪ್ಪ ನಾಗರಾಜು,ಪತ್ನಿ ಮಂಗಳಮ್ಮ ಮತ್ತು ಅವರ ಮಗ ಸುನೀಲ್ ಕುಮಾರ್ ಕೊಲೆ ಮಾಡಿರುವ ಆರೋಪಿಗಳಾಗಿದ್ದಾರೆ.
ಜಮೀನಿನಲ್ಲಿ ನಿನ್ನೆ ಮಧ್ಯರಾತ್ರಿ ಹುಲ್ಲು ಕೊಯ್ಯುವ ವಿಚಾರವಾಗಿ ಗಲಾಟೆ ನಡೆದು ಈ ಮೂವರಿಂದ ಏಕಾಏಕಿ ರಂಜಿತ್ ಮೇಲೆ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ.
ದುಷ್ಕರ್ಮಿಗಳು ಮನಸೋ ಇಚ್ಛೆ ಹೊಡೆದು ಕೊಂದು ಬಳಿಕ ರಂಜಿತ್ ಮೃತದೇಹವನ್ನು ರಸ್ತೆ ಬದಿಗೆ ಎಳೆದು ಹಾಕಿ ಆರೋಪಿಗಳು ತಡರಾತ್ರಿಯೇ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.
ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ಲಾಂಗ್ ತೋರಿಸಿದ ಚಾಲಕ:
ದೇವನಹಳ್ಳಿ ತಾಲೂಕಿನ ನಲ್ಲೂರು ಟೋಲ್ ಬಳಿ ಪಾರ್ಕಿಂಗ್ ಇಲ್ಲ ಮುಂದೆ ಹೋಗಿ ಎಂದಿದ್ದಕ್ಕೆ ಲಾರಿ ಚಾಲಕನೊಬ್ಬ ಟೋಲ್ ಸಿಬ್ಬಂದಿಗೆ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಾನೆ.
ಪಾರ್ಕಿಂಗ್‌ಗೆ ಬೇರೆ ವಿಶ್ರಾಂತಿ ಸ್ಥಳವಿದ್ದರೂ ಟೋಲ್‌ನ ಬಳಿಯೇ ಲಾರಿಗಳ ಪಾರ್ಕಿಂಗ್ ಮಾಡುತ್ತಿದ್ದರು. ಅದನ್ನು ಪ್ರಶ್ನಿಸಲು ಹೋದರೆ ಉತ್ತರಭಾರತದ ಲಾರಿ ಚಾಲಕ ಟೋಲ್ ಸಿಬ್ಬಂದಿಗೆ ಲಾಂಗ್ ಹಿಡಿದು ಬೆದರಿಕೆ ಹಾಕಿದ್ದಾನೆ.
ಲಾಂಗ್ ತೋರಿಸಿದ್ದಕ್ಕೆ ಸಿಬ್ಬಂದಿ ಲಾರಿ ಏರಿ ಮಾತನಾಡುವ ವೇಳೆ ಏಕಾ ಏಕಿ ಸಿಬ್ಬಂದಿಯನ್ನೆ ಚಾಲಕ ಲಾರಿಯಲ್ಲಿ ಎಳೆದೊಯ್ದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಲವು ಲಾರಿ ಚಾಲಕರು ಮದ್ಯ ಸೇವಿಸಿ ಗಾಂಜಾ ಸೇವನೆ ಮಾಡಿ ಮಲಗುತ್ತಾರೆ ಎಂದು ಎಂದು ಟೋಲ್ ಸಿಬ್ಬಂದಿ ಆರೋಪಿಸಿದ್ದಾರೆ. ಕೇಳಲು ಹೋದರೆ ಕೆಲ ಚಾಲಕರು ಲಾಂಗ್ ತೋರಿಸಿ ರೌಡಿಸಂ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಸಿಬ್ಬಂದಿಯನ್ನು ಎಳೆದೊಯ್ದ ಲಾರಿ ಚಾಲಕನನ್ನು ಹಿಡಿದು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.