ವಿಜೃಂಭಣೆಯಿಂದ ಜರುಗಿದ ಶ್ರೀ ಸಿದ್ದರಾಮೇಶ್ವರರ‌ ರಥೋತ್ಸವ
ಸಂಜೆವಾಣಿ ವಾರ್ತೆ
ದಾವಣಗೆರೆ ಜು.6: ಸಿದ್ಧರಾಮರ ವ್ಯಕ್ತಿತ್ವ ಹಲವು ಮುಖಗಳಲ್ಲಿ ಅರಳಿದೆ.ಸಮೇಜೋಧಾರ್ಮಿಕ ಮಹಾನ್ ಸಾಹಸಿಯಾಗಿ, ಮಹಾಅನುಭಾವಿಯಾಗಿ, ಸಮಾಜಚಿಂತಕನಾಗಿ, ಸಮಾಜಸುಧಾರಕನಾಗಿ, ಸಮತೆಯ ಗಾರುಡಿಗನಾಗಿ, ಸರ್ವಜೀವದಯಾಪರನಾಗಿ, ಮಹಾಮಾನವತಾವಾದಿಯಾಗಿ, ವೀರ ವೈರಾಗ್ಯನಿಧಿಯಾಗಿ, ಜಂಗಮಜ್ಞಾನಿಯಾಗಿ, ಅವತಾರಿಯಾಗಿ, ಕ್ರಿಯೆ-ಜ್ಞಾನಗಳ ಸಮನ್ವಯಕನಾಗಿ, ಕರ್ಮಯೋಗಿ, ಕಾಯಕಯೋಗಿ, ಶಿವಯೋಗಿ ಒಟ್ಟಿನಲ್ಲಿ ಸಿದ್ಧರಾಮರು ತನ್ನ ಜನಾನುರಾಗಿ ಕಾರ್ಯಗಳಿಂದ ಅಂದಿನ ಕನ್ನಡ ನಾಡಿನ ಜನಗಳ ಮನಸ್ಸಿನಲ್ಲಿ ಜೀವಂತವಾಗಿದ್ದರು. ಇವರು “ಸಮಕಾಲೀನ ಜನರಿಗೆ ಗುರುವಾಗಿ, ಉತ್ತರಕಾಲೀನರಿಗೆ ದೇವನಾಗಿ” ದರ್ಶನವನ್ನು ನೀಡುತ್ತಾರೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.ನಗರದ ವೆಂಕಭೋವಿ ಕಾಲೋನಿಯಲ್ಲಿರುವ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠ ದಾವಣಗೆರೆ ಶಾಖೆಯಿಂದ ಜರುಗಿದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 62ನೇ ರಥೋತ್ಸವ ಮಠದ ಸಂಸ್ಥಾಪಕರಾದ ಲಿಂಗೈಕ್ಯ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿರವರ 22ನೇ ಸಂಸ್ಮರಣೋತ್ಸವದ ದಿವ್ಯಾಧ್ಯಕ್ಷತೆವಹಿಸಿಕೊಂಡು ಮಾತನಾಡಿದ ಪೂಜ್ಯರು ಸಿದ್ಧರಾಮರ ವ್ಯಕ್ತಿತ್ವ ಅಸಾಧಾರಣವಾದುದು. ಒಂದು ಪರಂಪರೆಯನ್ನು ಕಟ್ಟುವಲ್ಲಿನ ತಾದಾತ್ಮ, ಬದ್ಧತೆ, ಪ್ರಸಿದ್ದಿ ಹಾಗೂ ಅವರ ದೈವತ್ವದ ಗುಣ ಒಂದು ಸಂಸ್ಕೃತಿಯನ್ನು ಹುಟ್ಟಿಹಾಕಿತು. ಸಿದ್ದರಾಮರದು ಶ್ರಮಿಕ ಪರಂಪರೆ. ಕನ್ನಡವೇ ಸಿದ್ಧರಾಮರ ಉಸಿರು ಈ ಮಣ್ಣಿನ ಭಾಷೆ, ಬಯಲ ಧರ್ಮ ಅವರ ಮಾಧ್ಯಮವಾಯಿತು. ಜನರನ್ನು ಪ್ರೀತಿಸುವ ಜನಮುಖಿ ವ್ಯಕ್ತಿತ್ವ, ಸಮಾಜದ ಕಷ್ಟಕೋಟಲೆಗಳಿಗೆ ತುಡಿಯುವ, ಸ್ಪಂದಿಸುವ ತಾಯಿ ಹೃದಯ ಮಹಿಳೆಯರನ್ನು, ನೊಂದವರನ್ನು, ಅಶಕ್ತರನ್ನು ಪ್ರೀತಿಯಿಂದ ಕಾಣುವ, ಅವರಿಗೆ ಬದುಕನ್ನು ಕಲ್ಪಿಸಿಕೊಡುವ ಅಂತಃಕರಣ ಆ ನಿಟ್ಟಿನಲ್ಲಿ ತಾನು ಕಟ್ಟಿದ ನಿರ್ವಹಿಸಿದ ಕೆರೆ, ಕಟ್ಟೆ, ಕಾಲುವೆ, ಬಾವಿ, ಛತ್ರ, ಮಂದಿರ, ಶಿಕ್ಷಣ ಕ್ಷೇತ್ರಗಳು ಇತರೆ ಸಾಮಾಜಿಕ ಕೆಲಸಗಳೊಡನೆ ಇದ್ದರೂ ಅವುಗಳನ್ನೇ ತನ್ನ ಕಾರುಬಾರು ಮಾಡಿಕೊಳ್ಳದ ಜಂಗಮತನ ಸಿದ್ದರಾಮರನ್ನು ಇತರ ಆಧ್ಯಾತ್ಮ ಶರಣ ಜೀವಿಗಳಿಗಿಂತ ವಿಭಿನ್ನ ಮಾಡಿತು. ಸಮಾಜ ಸುಧಾರಣೆಯ ಚಿಂತನೆ, ಒಳನೋಟ ಸಿದ್ಧರಾಮ ಸಂಸ್ಕೃತಿ ನೆಲೆಯೂರಲು ಕಾರಣವಾಯಿತು. “ದೇಹವನ್ನೇ ದೇಗುಲವಾಗಿಸಿಕೊಂಡ” ಶರಣ ಸಂಸ್ಕೃತಿಯನ್ನು ಒಪ್ಪಿಕೊಂಡೂ ತನ್ನತನವನ್ನು ಉಳಿಸಿಕೊಂಡು ಮೇರುಮಟ್ಟಕ್ಕೆ ಬೆಳೆದದ್ದು ಸಿದ್ಧರಾಮರ ಸಂಸ್ಕೃತಿ.ಮಠಮಾನ್ಯಗಳನ್ನು ಕಟ್ಟಿಯೂ ಅಲ್ಲಿರದ, ಸಾಮಾಜಿಕ ವ್ಯಕ್ತಿಯಾದರೂ ಆಧ್ಯಾತ್ಮ ಚಿಂತಕನಾದ, ಒಂದು ನಾಡು ಮಾತನಾಡುವಷ್ಟು ಕೆಲಸವನ್ನು ತನ್ನ ಒಳಗಣ್ಣಿನ ಬೆಳಕಿನಿಂದ ವ್ಯಕ್ತಿಯೊಬ್ಬ ಶಕ್ತಿಯಾಗಿ ನಿರ್ವಹಿಸಿದ ರೀತಿ ಅನನ್ಯವಾದುದು.ಶ್ರಮ ಸಂಸ್ಕೃತಿ ಸಿದ್ಧರಾಮ ಸಂಸ್ಕೃತಿಯ ಆತ್ಮ. ಈ ಚಿಂತನೆಯೇ ಎಲ್ಲರನ್ನು ಸಮಾನವಾಗಿ ಪ್ರೀತಿಸುವ, ಎಲ್ಲರಿಗೂ ಬದುಕು ನೀಡುವ ಚೈತನ್ಯದ ಆಧಾರ ಗುಣ. “ಶಿವಯೋಗಿಯ ಶರೀರ ವೃಥಾ ಸವೆಯಲಾಗದು, ಅನುಗೊಂಬನಿತು ಕಾಯಕ ನಡೆಯಬೇಕು” ಎಂಬ ಕಾಯಕ ನಿಷ್ಠೆಯೇ ಸಿದ್ಧರಾಮ ಸಂಸ್ಕೃತಿಯ ಮೂಲಾಧಾರ. ತನ್ನ ಅಮೋಘ ವ್ಯಕ್ತಿತ್ವದಿಂದಾಗಿ ಬದುಕಿದ್ದಾಗಲೇ ದಂತಕತೆಯಾದವರು ಸಿದ್ಧರಾಮರು. ಹೊಸ ಪರಂಪರೆಯ ಸಂಸ್ಕೃತಿಯೊಂದಕ್ಕೆ ದಾರಿಯಾದವರು ಎಂದು ತಿಳಿಸಿದರು.ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮಾತನಾಡಿ ಸಿದ್ಧರಾಮನ ಜೀವನವನ್ನು ಗಮನಿಸಿದಾಗ, ಅವನಿಗೆ ಆತ್ಮಜ್ಞಾನಿ ಅಲ್ಲಮಪ್ರಭುವಿನ ದರ್ಶನವಾಗುವವರೆಗೆ, ನಾಥಪರಂಪರೆ ಚಿಂತನೆಯ ಪರಮಾರ್ಥ, ಇಹ-ಪರ, ಸ್ವರ್ಗ- ನರಕ, ಮಡಿ-ಮೈಲಿಗೆ, ಪೂರ್ವಜನ್ಮ-ಪುನರ್ಜನ್ಮ, ವರ್ಣ-ವರ್ಗ, ಸ್ತ್ರೀ-ಪುರುಷ, ಶಾಂತಿ-ಸಮಾರಾಧನೆ, ತೀರ್ಥಯಾತ್ರೆ, ಹೋಮ-ಹವನ, ಪೂಜೆ-ಹರಕೆ, ಗುಡಿ- ಗುಂಡಾರ ಇಂತಹ ಅರ್ಥಹೀನ ಪದ್ಧತಿ ಮತ್ತು ಆಚರಣೆಗಳೇ ಧರ್ಮವೆಂಬ ನಂಬಿಕೆಯಲ್ಲಿದ್ದ. ಆದರೆ ಶರಣ ಸಿದ್ದಾಂತದ ಗುರು-ಲಿಂಗ-ಜಂಗಮದ ಅರಿವಾದ ನಂತರ, ಕಾಯಕ, ದಾಸೋಹ, ಅನುಭಾವಗಳು ಅರ್ಥವಾದಾಗ ಅವನು ಪೂರ್ಣ ಪರಿವರ್ತನೆಗೊಳ್ಳುತ್ತಾನೆ ಎಂದು ತಿಳಿಸಿದರು.