ಶಾಸಕ ಚೆನ್ನಾರೆಡ್ಡಿ ಪಾಟೀಲ್ ವಜಾಗೆ ಒತ್ತಾಯ
ಸಂಜೆವಾಣಿ ನ್ಯೂಸ್
ಮೈಸೂರು: ಆ.06:- ಯಾದಗಿರಿ ನಗರ ಪೆÇಲೀಸ್ ಠಾಣೆಯ ಪಿಎಸ್‍ಐ ಪರಶುರಾಮ್ ಆತ್ಮಹತ್ಯೆಗೆ ಕಾರಣವಾಗಿರುವ ಶಾಸಕ ಚಿನ್ನಾರೆಡ್ಡಿ ಪಾಟೀಲ್ ತುನ್ನೂರು ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಮೃತ ಅಧಿಕಾರಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಭವನದ ಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪತ್ರಿಮೆ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 7 ತಿಂಗಳ ಹಿಂದಷ್ಟೇ ಯಾದಗಿರಿ ನಗರ ಪೆÇಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದ ಪಿಎಸ್‍ಐ ಪರಶುರಾಮ್ ಅವರನ್ನು ಇದೆ ಠಾಣೆಯಲ್ಲಿ ಮುಂದುವರೆಸಲು 30 ಲಕ್ಷ ರೂ. ಬೇಡಿಕೆ ಇಟ್ಟು ಶಾಸಕ ಚಿನ್ನಾರೆಡ್ಡಿ ಪಾಟೀಲ್ ತುನ್ನೂರು ಮತ್ತು ಆತನ ಮಗ ಸನ್ನಿಗೌಡ ಮಾನಸಿಕವಾಗಿ ಹಿಂಸಿಸಿ, ಅವಮಾನಿಸಿ, ಖಿನ್ನತೆಗೊಳಗಾಗುವಂತೆ ಮಾಡಿದ್ದರು. ಪರಿಣಾಮ ಪರಶುರಾಮ್ ಆತ್ಮಹತ್ಯೆಗೆ ಶರಣಾಗಲು ಕಾರಣವಾಗಿದೆ ಎಂದು ಅವರ ಪತ್ನಿ ಎನ್.ವಿ.ಶ್ವೇತಾ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ದುರ್ಘಟನೆಯಿಂದ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಸಂಘರ್ಷ ಸಮಿತಿಯ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಪಿಎಸ್‍ಐ ಪರಶುರಾಮ್ ಆತ್ಮಹತ್ಯೆ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ನಡೆಸಬೇಕು. ಶಾಸಕ ಚಿನ್ನಾರೆಡ್ಡಿ ಪಾಟೀಲ್ ತುನ್ನೂರು ಮತ್ತು ಆತನ ಮಗ ಸನ್ನಿಗೌಡ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಾಸಕರ ಆಸ್ತಿ ಮುಟ್ಟಗೋಲು ಹಾಕಿ ಮೃತ ಅಧಿಕಾರಿಯ ಕುಟುಂಬಕ್ಕೆ ಹಸ್ತಾಂತರಿಸಬೇಕು. ಮೃತ ಅಧಿಕಾರಿ ಪತ್ನಿಗೆ ಸರ್ಕಾರಿ ಉದ್ಯೋಗ ನೀಡಿ ಸರ್ಕಾರದಿಂದ 50 ಲಕ್ಷ ರೂ. ಪರಿಹಾರ ನೀಡಬೇಕು. ಎಲ್ಲಾ ಇಲಾಖೆಗಳಲ್ಲೂ ಕೌನ್ಸಿಲಿಂಗ್ ಮೂಲಕವೇ ವರ್ಗಾವಣೆ ನೀತಿ ಜಾರಿಯಾಗಿ ವರ್ಗಾವಣೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ತಡೆಗಟ್ಟುವ ಕಾಯ್ದೆ ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಸದಸ್ಯರಾದ ಮರಿಸ್ವಾಮಿ ಕನ್ನಾನಾಯನಕನಳ್ಳಿ, ಮನೋಜ್, ಪ್ರಭಾಕರ್, ಅಣ್ಣಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.