ಸಿದ್ದರಾಮಯ್ಯ ನಿವೇಶನ ನೀಡಿ ತನಿಖೆಗೆ ಒಪ್ಪಿಸಲಿ: ಎಚ್.ವಿಶ್ವನಾಥ್
ಸಂಜೆವಾಣಿ ನ್ಯೂಸ್
ಮೈಸೂರು: ಆ.06:- ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ನಿಮ್ಮ ಪಂಚೆ ಮಸಿಯಾಗಿದೆ. ಮುಂದೆ ಮುಖ ಮಸಿಯಾಗುವ ಮುನ್ನಾ? ನಿವೇಶನ ಹಿಂದಿರುಗಿಸಿ, ತನಿಖೆಯನ್ನು ಸಿಬಿಐಗೆ ಒಪ್ಪಿಸಿ. ಭಾಗಿಯಾಗಿರುವವರೆಲ್ಲ ಸಿಕ್ಕಿಹಾಕಿಕೊಂಡು ಸಾಯಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸಲಹೆ ನೀಡಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನೀವು ಸಮಾಜವಾದಿ ಎಂದು ಹೇಳಿಕೊಳ್ಳುತ್ತೀರಿ. 14 ನಿವೇಶನ ಇಟ್ಟುಕೊಂಡು ನೀವೇನು ಮಾಡಬೇಕು. ಮುಡಾಗೆ ವಾಪಸ್ ಕೊಟ್ಟುಬಿಡಿ. ನಿಮ್ಮ ಘನತೆಯೂ ಹೆಚ್ಚುತ್ತದೆ. ವಾಪಸ್ ಕೊಟ್ಟರೆ ತಪ್ಪು ಒಪ್ಪಿಕೊಂಡಂತೆ ಆಗುತ್ತದೆ ಎನ್ನುವುದು ಬಿಡಿ. ಪ್ರತಿಷ್ಠೆ ಬಿಟ್ಟು ನಿವೇಶನ ಒಪ್ಪಿಸಿ ದೊಡ್ಡತನ ಮೆರೆಯಿರಿ. ನಿಮಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಒಬ್ಬರು ಸತ್ತು ಹೋಗಿದ್ದಾರೆ. ಇರುವ ಇನ್ನೊಬ್ಬ ಮಗನಿಗೆ ಇನ್ನೆಷ್ಟು ಬೇಕು ಎಂದು ಕಿವಿಮಾತು ಹೇಳಿದರು.
ಮುಡಾ ನಿವೇಶನ ವಿಚಾರವಾಗಿ ಕಾನೂನು ನಮ್ಮ ಕಡೆ ಇದೆ ಎಂದು ಹೇಳುತ್ತೀರಿ. ಆದರೆ ನಾನು ಹೇಳುತ್ತಿರುವುದು ಪುಸ್ತಕದ ಕಾನೂನು ಅಲ್ಲ. ಸಾರ್ವಜನಿಕ ನ್ಯಾಯಸ್ಥಾನದ ಕಾನೂನಿನ ಬಗ್ಗೆ. ಮುಖ್ಯಮಂತ್ರಿಯಾಗಿದ್ದರೂ 14 ನಿವೇಶನ ಬರೆಯಿಸಿಕೊಂಡಿದ್ದೇನೆ ಎಂದು ಜನರು ಮಾತನಾಡುವುದನ್ನು ಯಾವ ರೀತಿ ನಿವಾರಣೆ ಮಾಡಿಕೊಳ್ಳುತ್ತೀರಿ. ಈ ಮೊದಲೇ ಹೇಳಿದ್ದೆ ನಿಮ್ಮ 3.14 ಎಕರೆ ಜಮೀನಿನಲ್ಲಿ ಶಾಲೆ ತೆರೆಯಿರಿ, ಬೇರೆ ಕಲ್ಯಾಣ ಯೋಜನೆಗಳ ಕೇಂದ್ರಗಳನ್ನು ಸ್ಥಾಪನೆ ಮಾಡಿ. ಏಕೆಂದರೆ ಅಲ್ಲಿ ಅಹಿಂದ ಜನರೇ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಹೀಗಾಗಿ ಈಗಲೂ ಕಾಲ ಮಿಂಚಿಲ್ಲ. ನಿವೇಶನ ವಾಪಸ್ ಕೊಟ್ಟುಬಿಡಿ ಎಂದು ಬುದ್ಧಿವಾದ ಹೇಳಿದರು.
ಎಲ್ಲವನ್ನು ಕಿತ್ತು ಹಾಕಿದ್ದಾರೆ: ನಿವೇಶನ ಹಗರಣವನ್ನು ತನಿಖೆ ಮಾಡಬೇಕು ಎಂದು ಅಧಿಕಾರಿಗಳನ್ನು ಬೇರೆ ಕಡೆ ವರ್ಗ ಮಾಡಲಾಯಿತು. ಆದರೆ ಅವರೇ ಮತ್ತೆ ವಾಪಸ್ ಬಂದಿದ್ದಾರೆ. ಮುಡಾದಲ್ಲಿ ಇರುವ ಸಿಸಿ ಕ್ಯಾಮೆರಾಗಳನ್ನು ಕಿತ್ತು-ಕಿತ್ತು ಬಿಸಾಕುತ್ತಿದ್ದಾರೆ. ಇದನ್ನೆಲ್ಲ ಹೊಸದಾಗಿ ಬಂದಿರುವ ಆಯುಕ್ತರು ಸುಮ್ಮನೆ ನೋಡುತ್ತ ಕುಳಿತ್ತಿದ್ದಾರೆ. ಮುಡಾಗೆ ತಿರುಗಿ ಬಂದಿರುವವರು ನಗರಾಭಿವೃದ್ಧಿ ಸಚಿವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅಲ್ಲಿರುವವರನ್ನು ಹೊರಗೆ ಕಳುಹಿಸದ ಹೊರತು, ಯಾವುದೇ ತನಿಖೆ ನಡೆಯುವುದಿಲ್ಲ. ಏನೂ ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮುಡಾ ವಿಚಾರದಲ್ಲಿ ಎಲ್ಲರೂ ಸತ್ಯವಂತರೆ, ಕುಮಾರಸ್ವಾಮಿ ಸತ್ಯವಂತರೆ, ಯಡಿಯೂರಪ್ಪ ಸತ್ಯವಂತರೆ. ಆದರೆ ಎಲ್ಲ ಶಾಸಕರು ಕೈ ಚಾಚಿ ಕುಳಿತ್ತಿದ್ದಾರೆ. ನಾನು ಮತ್ತು ಶ್ರೀವತ್ಸ ಮಾತ್ರ ಕಾಲುಚಾಚಿ ಕುಳಿತ್ತಿದ್ದೇವೆ ಎಂದು ಮಾರ್ಮಿಕವಾಗಿ ನುಡಿದರು.
ಮೂರು ಬಿಟ್ಟ ಪಕ್ಷಗಳಿಂದ ಯಾತ್ರೆ:
ಮೂರು ಬಿಟ್ಟವರಂತೆ ಆಡುತ್ತಿರುವ ಮೂರು ಪಕ್ಷಗಳಿಂದ ಈಗ ನಡೆಯುತ್ತಿರುವ ಪಾದಯಾತ್ರೆ ಹಾಗೂ ಜನಾಂದೋಲನ ಯಾತ್ರೆ ಯಾವ ಪುರುಷಾರ್ಥಕ್ಕೆ ಎಂದು ಅರ್ಥವಾಗುತ್ತಿಲ್ಲ. ನಾಡಿನ ಹಿತಾಸಕ್ತಿ ಮರೆತು, ಪರಸ್ಪರ ದೋಷಾರೋಪಣೆ ಮಾಡಿಕೊಳ್ಳುತ್ತಾ, ಕೆಸರು ಎರಚಿಕೊಳ್ಳುತ್ತಿದ್ದಾರೆ. ಚಲುವ ಕನ್ನಡ ನಾಡಿನ ಚಲುವ ಭಾಷೆಯನ್ನು ಹೊಲಸು ಮಾಡುತ್ತಿದ್ದಾರೆ. ಕನ್ನಡ ಭಾಷೆಯ ಕೊಲೆಯಾಗುತ್ತಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಎಲ್ಲರೂ ಬಿಚ್ತೀನಿ, ನಿಂದ್ ಬಿಚ್ತೀನಿ ಎನ್ನುತ್ತಾರೆ. ಏನಿದೆ ಅಲ್ಲಿ ನೋಡುವುದಕ್ಕೆ? ಇವರು ಜನರ ಬಳಿ ಬೆತ್ತಲಾಗುತ್ತಿದ್ದಾರೆ.
ಕನ್ನಡ ಭಾಷೆಯನ್ನು ಇವರ ಮಾತುಗಳ ಮೂಲಕ ಅತ್ಯಾಚಾರ ಮಾಡುತ್ತಿದ್ದಾರೆ. ಮೈಸೂರು ಸಾಂಸ್ಕೃತಿಕ ನಗರಿ, ಇಲ್ಲಿಂದ ಹೋದವರಲ್ಲಿಯೂ ಭಾಷೆಯ ಸಂಸ್ಕೃತಿ-ಸಂಸ್ಕಾರ ಇಲ್ಲದೇ ಇರುವುದನ್ನು ನೋಡಲು ಆಗುತ್ತಿಲ್ಲ. ಇದರ ವಿರುದ್ಧ ನಮ್ಮ ಕನ್ನಡ ಚಳವಳಿಗಾರರು ಹೋರಾಡಬೇಕು. ಸಾಹಿತಿಗಳು-ಚಿಂತಕರು ಸರ್ಕಾರದ ಫಲಾನುಭವಿಗಳಾಗಿರುವುದಿಂದ ಅವರ ಪಾಡಿಗೆ ಮಾತನಾಡುತ್ತಾರೆ. ಮಲಗಿ ಬಿಡುತ್ತಾರೆ. ಹೀಗಾಗಿ ರಾಜಕಾರಣಿಗಳ ಈ ಭಾಷಾ ಪ್ರಯೋಗ ವಿರೋಧಿಸಿ ಕನ್ನಡಿಗರು ಧೈರ್ಯವಾಗಿ ಸೆಟೆದು ನಿಲ್ಲುವಂತೆ ಆಗಬೇಕು ಎಂದು ವಿಶ್ವನಾಥ್ ಹೇಳಿದರು.