ವರ್ತುಲ ರಸ್ತೆ ನಿರ್ಮಾಣ: ಕಾಡಹಳ್ಳಿ ಸಮೀಪ ರೈತರ ಜಮೀನುಗಳ ದಾರಿಯೇ ಬಂದ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.06:- ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ವರ್ತುಲ ರಸ್ತೆಯ ಕಾಮಗಾರಿಗಾಗಿ ರೈತರ ಜಮೀನುಗಳಿಗೆ ಹೋಗುವ ದಾರಿಯನ್ನು ಮುಚ್ಚಿದ್ದು, ದೊಡ್ಡ ಹೊಂಡಾಗಳನ್ನು ನಿರ್ಮಿಸಿ, ರೈತರು ಜಮೀನುಗಳಿಗೆ ಹೋಗದಂತ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಚಾಮರಾಜನಗರದ ಹೊರ ವಲಯದಲ್ಲಿ ವರ್ತುಲ ರಸ್ತೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿ, ಸುಮಾರು 8 ವರ್ಷಗಳೇ ಕಳೆದಿದೆ. ಕುಂಟುತ್ತಾ ಸಾಗುತ್ತಿದ್ದ ಕಾಮಗಾರಿ ಈಗ ವೇಗ ಪಡೆದುಕೊಂಡಿದೆ. ನಂಜನಗೂಡು ಮಾರ್ಗದ ರಸ್ತೆಯಿಂದ ಕೊಳ್ಳೇಗಾಲ ಮಾರ್ಗದ ರಸ್ತೆಗೆ ಸಂಪರ್ಕ ಕಲ್ಪಿಸುವ ಕಾಡಹಳ್ಳಿ, ದೊಡ್ಡರಾಯಪೇಟೆ ಕ್ರಾಸ್‍ವರೆಗಿನ ರಸ್ತೆ ಕಾಮಗಾರಿಯಲ್ಲಿ ಮಧ್ಯ ಬರುವ ಸರ್ಕಾರಿ ಓಣಿ, ಸರ್ಕಾರಿ ದಾರಿಗಳನ್ನು ಗುತ್ತಿಗೆದಾರರು ಬಂದ್ ಮಾಡಿದ್ದಾರೆ.
ಅಲ್ಲದೇ ರಸ್ತೆಯನ್ನು ಎತ್ತರ ಮಾಡಲು ಹೊರಗÀಡೆಯಿಂದ ಮಣ್ಣು ತರುವ ಬದಲು ಅಕ್ಕಪಕ್ಕದಲ್ಲಿರುವ ರೈತರ ಜಮೀನುಗಳಲ್ಲಿಯೇ ಮಣ್ಣು ಹಗೆದು ರಸ್ತೆ ನಿರ್ಮಾಣ ಮಾಡಿದ ಪರಿಣಾಮ ರಸ್ತೆ ಬದಿಯಲ್ಲಿರುವ ರೈತರ ಜಮೀನುಗಳು ಹಳ್ಳವಾಗಿ ಕೆರೆಯಂತಾಗಿವೆ. ರೈತರ ಜಮೀನುಗಳಿಗೆ ಹೋಗುತ್ತಿದ್ದ ಸರ್ಕಾರಿ ಓಣಿ ಹಾಗು ದಾರಿಗಳನ್ನು ಅಗೆದು ಹಾಕಲಾಗಿದೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಉಳುಮೆಗೆ ಟ್ರಾಕ್ಟರ್, ಎತ್ತು, ಗಾಡಿಗಳು ಹಾಗೂ ಬೆಳೆದ ಫಸಲುಗಳನ್ನು ಜಮೀನಿನಿಂದ ಹೊರಗಡೆ ಸಾಗಿಸಲು ದಾರಿ ಇಲ್ಲದೇ ರೈತರು ಪರದಾಡುವಂತಾಗಿದೆ.
ಈ ಬಗ್ಗೆ ಗುತ್ತಿಗೆದಾರರನ್ನು ಪ್ರಶ್ನೆ ಮಾಡಿದರೆ, ಉಡಾಫೆಯಿಂದ ವರ್ತಿಸುತ್ತಾರೆ. ಅಲ್ಲದೆ ಗುತ್ತಿಗೆ ಪಡೆದುಕೊಂಡಿರುವ ವ್ಯಕ್ತಿ ಮರು ಟೆಂಡರ್ ನೀಡಿದ್ದು, ಯಾರು ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ. ಪ್ರಾಧಿಕಾರದ ಅಧಿಕಾರಿಗಳು ಪರಿಶೀಲನೆ ಬಂದಾಗ ಮಾತ್ರ ರಸ್ತೆ ಮಾಡಿಸಿಕೊಡುತ್ತೇವೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಕಾಡಹಳ್ಳಿ ಭಾಗದ ಹತ್ತಕ್ಕು ಹೆಚ್ಚು ರೈತರು ತಮ್ಮ ಜಮೀನಿಗೆ ಹೋಗುತ್ತಿದ್ದ ದಾರಿಯನ್ನು ಮುಚ್ಚಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು, ಅವರು ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ಗ್ರಾಮದ ಮುಖಂಡ ಕಾಡಹಳ್ಳಿ ಕುಮಾರ್ ತಿಳಿಸಿದ್ದಾರೆ.
ನಂಜನಗೂಡು ಮಾರ್ಗದಿಂದ ಕೊಳ್ಳೆಗಾಲಕ್ಕೆ ಸಂಪರ್ಕ ನೀಡುವ ರೈಲ್ವೆ ಮಲ್ಸೇತುವೆ, ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿದ್ದು, ದೊಡ್ಡರಾಯಪೇಟೆ ಕ್ರಾಸ್‍ವರೆಗಿನ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಹಂತದಲ್ಲಿ ನಮ್ಮ ಜಮೀನುಗಳಿಗೆ ಹೋಗುವ ದಾರಿ ಮತ್ತು ಓಣಿಯನ್ನು ಗುತ್ತಿಗೆದಾರರು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಸರಿಪಡಿಸಿಕೊಡಬೇಕು. ತಪ್ಪಿದ್ದಲ್ಲಿ ರೈತರೊಡಗೂಡಿ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ.
ಹೆದ್ದಾರಿಯಲ್ಲಿ ಈ ಭಾಗದ ಎಲ್ಲಾ ರೈತರು ಟ್ಯಾಕ್ಟರ್, ಎತ್ತುಗಾಡಿ, ಹಸುಗಳೊಂದಿಗೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಕಾಡಹಳ್ಳಿ ಕುಮಾರ್ ಎಚ್ಚರಿಕೆ ನೀಡಿದ್ದಾರೆ.