ಮಹದೇವಪ್ರಸಾದ್ ಜನಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು: ಶಾಸಕ ಗಣೇಶ್ ಪ್ರಸಾದ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.06:- ಮಾಜಿ ಸಚಿವರಾದ ಎಚ್.ಎಸ್.ಮಹದೇವಪ್ರಸಾದ್ ಅವರು ಜನಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶಪ್ರಸಾದ್ ತಿಳಿಸಿದರು.
ತಾಲೂಕಿನ ಹರವೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಜಿ ಸಚಿವ ದಿ. ಎಚ್.ಎಸ್. ಮಹದೇವಪ್ರಸಾದ್ ಅವರ 66ನೇ ವರ್ಷದ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ನಡೆದ ಕಣ್ಣಿನ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ತಂದೆಯವರಾದ ಎಚ್.ಎಸ್.ಮಹದೇವಪ್ರಸಾದ್ ಅವರು ಗುಂಡ್ಲುಪೇಟೆ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ರಾಜ್ಯದಲ್ಲಿ ವರ್ಚಸ್ಸಿ ನಾಯಕರಾಗಿದ್ದರು. 5 ಬಾರಿ ಶಾಸಕರಾಗಿ, ಸಚಿವರಾಗಿ ಉತ್ತಮ ಸೇವೆ ಸಲ್ಲಿಸುವ ಜೊತೆ ಕ್ಷೇತ್ರದ ಜನತೆಯೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. 2008 ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾದಾಗ ಹರವೆ ಭಾಗದ 5 ಗ್ರಾ.ಪಂ.ಗಳು ಕ್ಷೇತ್ರಕ್ಕೆ ಸೇರ್ಪಡೆಯಾಗಿತ್ತು. ಅಲ್ಲಿಂದ ಈ ಭಾಗದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದರು. ಪ್ರಮುಖವಾಗಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಮೊರಾರ್ಜಿ ವಸತಿ ಶಾಲೆ ಸೇರಿದಂತೆ ಶಿಕ್ಷಣ, ಆರೋಗ್ಯ, ರಸ್ತೆ, ಮೂಲಭೂತ ಸೌಲಭ್ಯ ನೀಡಲು ಶ್ರಮಿಸುತ್ತಿದ್ದರು. ಹೀಗಾಗಿ ಅವರು ಇನ್ನು ಸಹ ಜನಮಾನಸದಲ್ಲಿ ಉಳಿದಿದ್ದಾರೆ. ಅವರ ಹುಟ್ಟುಹಬ್ಬವನ್ನು ಸೇವಾ ಕಾರ್ಯದ ಮೂಲಕ ಕೆರೆಹಳ್ಳಿ ನವೀನ್ ನೇತೃತ್ವದಲ್ಲಿ ಅವರ ತಂಡ ಹಾಗೂ ಸ್ನೇಹಿತರು ಕಳೆದ 9 ವರ್ಷಗಳಿಂದ ಆಚರಣೆ ಮಾಡಿಕೊಂಡು ಬರುತ್ತಿರುವುದು ಪ್ರಶಂಸನೀಯ ಎಂದರು.
ಜಿ.ಪಂ.ಮಾಜಿ ಸದಸ್ಯ ಕೆರಹಳ್ಳಿ ನವೀನ್ ಮಾತನಾಡಿ, ನನ್ನ ನೆಚ್ಚಿನ ರಾಜಕೀಯ ಗುರುಗಳಾದ ಮಾಜಿ ಸಚಿವ ದಿ. ಎಚ್.ಎಸ್. ಮಹದೇವಪ್ರಸಾದ್ ಅವರ ಹುಟ್ಟುಹಬ್ಬವನ್ನು ಪ್ರತಿ ವರ್ಷದಂತೆ ಈ ಬಾರಿಯೂ ಸೇವಾ ಕಾರ್ಯಗಳೊಂದಿಗೆ ಆಚರಿಸಲಾಗುತ್ತದೆ. ತಂದೆಯ ಹಾದಿಯಲ್ಲಿ ಶಾಸಕ ಎಚ್.ಎಂ.ಗಣೇಶಪ್ರಸಾದ್ ಅವರು ಅಭಿವೃದ್ಧಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿದ್ದಾರೆ. ಕ್ಷೇತ್ರದ ಜನರ ಸಂಕಷ್ಟಗಳಿಗೆ ನೇರವಾಗಿ ಸ್ಪಂದಿಸುವ ಮೂಲಕ ದಿ. ಎಚ್.ಎಸ್. ಮಹದೇವಪ್ರಸಾದ್ ಅವರ ಅಭಿವೃದ್ಧಿ ಚಿಂತನೆ ಯನ್ನು ಮೈಗೂಡಿಸಿಕೊಂಡಿದ್ದಾರೆ ಎಂದರು
ಶಿಬಿರದಲ್ಲಿ 300ಕ್ಕೂ ಮಂದಿ ಭಾಗವಹಿಸಿ ತಪಾಸಣೆ ಮಾಡಿಸಿದರು. ಅದರಲ್ಲಿ 105ಮಂದಿ ಶಸ್ತ್ರಚಿಕಿತ್ಸೆಗೆ ಆಯ್ಕೆಗೊಂಡರು.
ಕಾರ್ಯಕ್ರಮದಲ್ಲಿ ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ತಾ.ಪಂ.ಮಾಜಿ ಅಧ್ಯಕ್ಷ ಎಂ.ಬಿ.ರೇವಣ್ಣ, ಸದಸ್ಯರಾದ ಮುಕ್ಕಡಹಳ್ಳಿ ರವಿಕುಮಾರ್, ಬಿ.ಎಸ್.ರೇವಣ್ಣ, ಉದಯಕುಮಾರ್, ಜಿ.ಪಂ.ಮಾಜಿ ಸದಸ್ಯ ಗುರುಸಿದ್ದೇಗೌಡ, ಮುಖಂಡರಾದ ಕೇತಹಳ್ಳಿ ಶಿವಪಾದಪ್ಪ, ಗುರುಬಸಪ್ಪ, ಪಿ.ಶೇಖರಪ್ಪ, ಮಲೆಯೂರು ನಾಗರಾಜು, ಹಳೇಪುರದ ಬಸವಣ್ಣ, ಪಿಆರ್‍ಓ ವಿಜಯಕಾಂತ್, ಮೂಡ್ನಾಕೂಡು ಕುಮಾರ್, ಪುಟ್ಟರಂಗನಾಯಕ, ಸಾಗಡೆ ನಂಜುಂಡನಾಯಕ, ಡಾ.ಸುರೇಶ್, ಪ್ರಕಾಶ್, ರಂಗಸ್ವಾಮಿ, ಮಧುಸೂದನ್, ಕೆಂಪರಾಜು ರಾಜ್‍ಕುಮಾರ್, ಕೆಬ್ವೇಪುರ ಹರೀಶ್, ಶಿವಕುಮಾರ್, ಕಲ್ಲುಪುರ ಸೋಮಶೇಖರ್ ಇತರರು ಹಾಜರಿದ್ದರು.