ಪ್ರವಾಹ ಹಾನಿ ಕುರಿತು ನಿಖರ ಸಮೀಕ್ಷೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.06:- ಕೊಳ್ಳೇಗಾಲ ತಾಲೂಕಿನ ಪ್ರವಾಹ ಸಮಸ್ಯೆಯ ಗ್ರಾಮಗಳಲ್ಲಿ ಇತ್ತೀಚಿನ ಪ್ರವಾಹದಿಂದ ಉಂಟಾದ ಬೆಳೆ ಹಾಗೂ ಮನೆ ಹಾನಿ ಕುರಿತು ನಿಖರವಾಗಿ ಸರ್ವೆ ಕಾರ್ಯ ಕೈಗೊಂಡು ವರದಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ಸೂಚನೆ ನೀಡಿದರು.
ಕೊಳ್ಳೇಗಾಲದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಳ್ಳೇಗಾಲ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇತ್ತೀಚೆಗೆ ಪ್ರವಾಹದಿಂದ ಜಮೀನುಗಳಿಗೆ ಹಾಗೂ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿರುವ ಕುರಿತು ಕರಾರುವಕ್ಕಾಗಿ ಸರ್ವೆ ಕಾರ್ಯ ಮಾಡಬೇಕು. ಎಷ್ಟು ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಎಷ್ಟು ಮನೆಗಳಿಗೆ ಹಾನಿಯಾಗಿದೆ ಎಂಬ ಬಗ್ಗೆ ಸಮರ್ಪಕವಾಗಿ ಸರ್ವೆ ನಡೆಸಬೇಕು. ಯಾವುದೇ ಹಾನಿ ಸಂಭವಿಸಿದ್ದರೂ ಸಮಗ್ರವಾಗಿ ಪರಿಶೀಲಿಸಿ ವರದಿ ಮಾಡಬೇಕು ಎಂದು ನಿರ್ದೇಶನ ನೀಡಿದರು.
ಪ್ರವಾಹ ಪೀಡಿತವಾಗಿದ್ದ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರು ಪೂರೈಸಬೇಕು. ಕಲುಷಿತ ಅಂಶಗಳಿಂದ ಹೊರತಾದ ನೀರು ಸರಬರಾಜಾಗುತ್ತಿದೆಯೇ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ನೀರು ಪರೀಕ್ಷೆಯ ವರದಿ ಪಡೆದುಕೊಳ್ಳಬೇಕು. ಗ್ರಾಮಗಳಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಬೇಕು. ಯಾವುದೆ ರೋಗ ರುಜಿನಗಳಿಗೆ ಆಸ್ಪದವಾಗದಂತೆ ನೈರ್ಮಲ್ಯ ಕಾರ್ಯವನ್ನು ಮುತುವರ್ಜಿ ವಹಿಸಿ ನಿರ್ವಹಿಸಬೇಕು ಎಂದರು.
ಪ್ರವಾಹ ಸಂತ್ರಸ್ತ ಗ್ರಾಮಗಳಲ್ಲಿ ಕೈಗೊಂಡ ಕ್ರಮಗಳು, ಕಾಳಜಿ ಕೇಂದ್ರಗಳ ನಿರ್ವಹಣೆ, ಜನರ ಸ್ಥಳಾಂತರ ಇನ್ನಿತರ ವಿವರಗಳನ್ನು ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಪ್ರವಾಹ ತಡೆಗಾಗಿ ಶಾಶ್ವತ ಪರಿಹಾರ ಕೈಗೊಳ್ಳಲು ಜನರು ಬಯಸಿದ್ದಾರೆ. ಪ್ರವಾಹ ತಡೆಯಲು ತಡೆಗೋಡೆ ನಿರ್ಮಾಣಕ್ಕಾಗಿ 150 ಕೋಟಿ ರೂ. ವೆಚ್ಚದಲ್ಲಿ ಅಂದಾಜು ಪಟ್ಟಿ ಸಿದ್ದಪಡಿಸಿದ್ದು, ಸಚಿವರ ಗಮನಕ್ಕೆ ತರಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮಣಿವಣ್ಣನ್ ಅವರು ಮಾತನಾಡಿ ಪ್ರವಾಹ ಸಂದರ್ಭದಲ್ಲಿ ಜಿಲ್ಲೆಯ ಅಧಿಕಾರಿಗಳ ತಂಡ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರಲ್ಲದೇ, ವಿಪತ್ತು ನಿರ್ವಹಣಾ ಸಮಯದಲ್ಲಿ ಒಂದು ತಂಡವಾಗಿ ಇದೇ ರೀತಿ ಪ್ರತಿಯೊಂದು ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ. ಜನರಿಗೆ ಸ್ಪಂದಿಸಿ ನೆರವಾಗಿ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆರೋಗ್ಯ ಸಂಬಂಧಿ ಸೌಲಭ್ಯಗಳು ಹೆಚ್ಚಿನ ಜನರಿಗೆ ತಲುಪಬೇಕು. ಆರೋಗ್ಯ ಸೇವೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಮೇಲಿನ ಕ್ರಮಾಂಕಕ್ಕೆ ಬರಬೇಕು. ವಿವಿಧ ಆರೋಗ್ಯ ಕಾರ್ಯಕ್ರಮಗಳು ಅನುಷ್ಠಾನವಾಗಬೇಕು. ಹಾಡಿ, ಅರಣ್ಯದಂಚಿನ ಜನರಿಗೆ ಆರೋಗ್ಯ ಸೌಕರ್ಯಗಳು ಲಭಿಸುವಂತೆ ನೋಡಿಕೊಳ್ಳಬೇಕು. ಒಟ್ಟಾರೆ ಜಿಲ್ಲೆಯ ಅಭಿವೃದ್ದಿಗೆ ಪೂರಕವಾದ ಎಲ್ಲಾ ಕಾರ್ಯಗಳನ್ನು ಅಧಿಕಾರಿಗಳು ನಿರ್ವಹಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಮಾತನಾಡಿ ವಯನಾಡು ಗುಡ್ಡಕುಸಿತ ಪ್ರಕರಣದಲ್ಲಿ ಜಿಲ್ಲಾಡಳಿತ ತ್ವರಿತವಾಗಿ ಸ್ಪಂದಿಸಿದೆ. ಜಿಲ್ಲೆಯಲ್ಲಿ ಕಂಟ್ರೋಲ್ ರೂಂ ಸಹಾಯವಾಣಿ ತೆರೆದು ಬೇರೆ ಬೇರೆ ಭಾಗಗಳಿಂದ ಬಂದ ಕರೆಗಳನ್ನು ಸ್ವೀಕರಿಸಿ ಅವರ ನೆರವಿಗೆ ಮುಂದಾಗಿದೆ. ಜಿಲ್ಲೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ವೈದ್ಯರ ತಂಡವನ್ನು ವಯನಾಡಿಗೆ ಕಳುಹಿಸಲಾಗಿತ್ತು. ಇಲ್ಲಿನ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ಸಂತ್ರಸ್ತ ಜನರಿಗೆ ಸಹಾಯ ಮಾಡಿದ್ದಾರೆ ಎಂದು ವಿವರಿಸಿದರು.
ಸಭೆಗೂ ಮೊದಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರವಾಹ ಸಮಸ್ಯೆಯ ಗ್ರಾಮಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ, ಉಪವಿಭಾಗಾಧಿಕಾರಿ ಮಹೇಶ್, ಜಂಟಿ ಕೃಷಿ ನಿರ್ದೇಶಕ ಆಬೀದ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಿದಂಬರ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕಾಧಿಕಾರಿ ಶಿವಪ್ರಕಾಶ್, ಜಿಲ್ಲಾ ನಗರಾಭಿವೃದ್ದಿ ಯೋಜನಾ ನಿರ್ದೇಶಕರಾದ ಎಂ.ವಿ. ಸುಧಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ ಸೇರಿದಂತೆ ತಾಲೂಕು ಅಧಿಕಾರಿಗಳು, ಪ್ರವಾಹ ಸಂಬಂಧಿ ಗ್ರಾಮಗಳ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.