ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾ ನದಿಗೆ ಹೆಚ್ಚುವರಿ ನೀರು ಬಿಡುಗಡೆ ಹಿನ್ನೆಲೆ ದೇವಲ ಗಾಣಗಾಪುರಕ್ಕೆ ಜಿ.ಪಂ. ಸಿಇಓ ಭೇಟಿ ನೀಡಿ ವೀಕ್ಷಣೆ
ಕಲಬುರಗಿ:ಆ.5:ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಸೋಮವಾರ ಭೀಮಾ ನದಿಗೆ ಸುಮಾರು 1.16ಲಕ್ಷ ಕ್ಯೂಸೆಕ್ಸ್ ನೀರು ಬಿಟ್ಟಿರುವುದರಿಂದ ಅಫಜಲಪೂರ ತಾಲ್ಲೂಕಿನ ದೇವಲ ಗಾಣಗಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದೇವಲ್‍ಗಾಣಗಾಪೂರದಿಂದ ಜೇರಟಗಿಗೆ ಸಂಪರ್ಕ ಕಲ್ಪಿಸುವ ಸೇತುವೆ ಹಾಗೂ ಶ್ರೀ ದತ್ತ ಸನ್ನಿಧಾನದ ಸಂಗಮ ಸ್ಥಳವು ಭೀಮಾ ನದಿ ದಡದಲ್ಲಿರುವುದರಿಂದ ಈ ಸ್ಥಳಗಳಿಗೆ ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಭಂವರ್ ಸಿಂಗ್ ಮೀನಾ ಅವರು ಭೇಟಿ ನೀಡಿ ವೀಕ್ಷಣೆ ಮಾಡಿ, ಅಲ್ಲಿನ ಜನರಿಗೆ ಮುನ್ನೆಚ್ಚರಿಕೆ ವಹಿಸಬೇಕೆಂದು ತಿಳಿಸಿದರು.
ನದಿಯ ದಡಭಾಗದಲ್ಲಿರುವ ಅಂಗಡಿಯವರೊಂದಿಗೆ ಮಾತನಾಡುತ್ತ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮ ನದಿಗೆ ಹೆಚ್ಚುವರಿ ನೀರು ಬಿಟ್ಟಿರುವದರಿಂದ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಆದ್ದರಿಂದ ತಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡುತ್ತಾ ಪ್ರವಾಹದ ಬಗ್ಗೆ ಕ್ಷಣ-ಕ್ಷಣದ ಮಾಹಿತಿ ನೀಡಬೇಕು ಮತ್ತು ನದಿ ತೀರಕ್ಕೆ ಜನರು ಹಾಗು ಜಾನುವಾರು ಹೋಗದಂತೆ ಮುಂಜಾಗೃತ ಕ್ರಮ ಜರುಗಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ಹಾಗೂ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರ ನಾಗರಾಜ ಹಾಗು ಅಫಜಲಪೂರ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ ಸೇರಿದಂತೆ ಸಂಬಂಧಿಸಿದ ಗ್ರಾಮ ಪಂಚಾಯತ ಸಿಬ್ಬಂದಿಗಳು ಉಪಸ್ಥಿತರಿದ್ದರು