ಅಗ್ನಿಶಾಮಕದಳದ ಕಚೇರಿಯ ಠಾಣಾಧಿಕಾರಿ ಸೇರಿ ಇಬ್ಬರು ಲೋಕಾಯುಕ್ತ ವಶಕ್ಕೆ
ಕಲಬುರಗಿ:ಆ.5: ನಗರದ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಕಚೇರಿಯಲ್ಲಿ ಲೋಕಾಯುಕ್ತರ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಸೇರಿ ಇಬ್ಬರು ಬಲೆಗೆ ಬಿದ್ದ ಘಟನೆ ಸೋಮವಾರ ವರದಿಯಾಗಿದೆ.
ಲೋಕಾಯುಕ್ತ ಎಸ್‍ಪಿ ಜಾನ್ ಆಂಟೋನಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಗುರುರಾಜ್ ಹಾಗೂ ಸಿಬ್ಬಂದಿ ಸೋಪನ್‍ರಾವ್ ಅವರನ್ನು ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್‍ಹ್ಯಾಂಡ್ ಆಗಿ ಹಿಡಿದು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಚಿತ್ತಾಪುರದ ರಾಜರಾಮಪ್ಪ ನಾಯಕ್ ಅವರು ಪೆಟ್ರೋಲ್ ಎನ್‍ಓಸಿ ಕೊಡುವುದಕ್ಕೆ ಕೇಳಿದಾಗ ಅಗ್ನಿಶಾಮಕದಳದ ಅಧಿಕಾರಿ ಮತ್ತು ಸಿಬ್ಬಂದಿ ಸುಮಾರು ಒಂದು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು. ಪರಿಣಾಮ 20,000ರೂ.ಗಳನ್ನು ಲಂಚ ಪಡೆಯುವಾಗ ಅಧಿಕಾರಿ ಹಾಗೂ ಸಿಬ್ಬಂದಿ ಇಬ್ಬರೂ ಲೋಕಾಯುಕ್ತರ ಬಲೆಗೆ ಸಿಲುಕಿದರು. ಈ ಕುರಿತು ತನಿಖೆಯನ್ನು ಲೋಕಾಯುಕ್ತರು ಮುಂದುವರೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಡಿಎಸ್‍ಪಿ ಮಂಜುನಾಥ್, ಇನ್‍ಸ್ಪೆಕ್ಟರ್ ಧ್ರುವತಾರ, ಸಿಬ್ಬಂದಿಗಳಾದ ಮಲ್ಲಿನಾಥ್, ಮಸೂದ್ ಮುಂತಾದವರು ಪಾಲ್ಗೊಂಡಿದ್ದರು.