ಶ್ರಾವಣ ಸೋಮವಾರ: ಶರಣಬಸವೇಶ್ವರರ ದೇವಸ್ಥಾನಕ್ಕೆ ಭಕ್ತರ ದಂಡು
ಕಲಬುರಗಿ:ಆ.5:ಶ್ರಾವಣ ತಿಂಗಳು ಆರಂಭವಾಗಿದ್ದು, ಆರಂಭದ ಸೋಮವಾರದಂದು ನಗರದ ಪ್ರಸಿದ್ಧ ಶ್ರೀ ಶರಣಬಸವೇಶ್ವರರ ದೇವಸ್ಥಾನಕ್ಕೆ ಭಕ್ತರ ದಂಡು ಹರಿದುಬಂದಿತ್ತು. ದೇವಸ್ಥಾನದ ಆವರಣವೆಲ್ಲ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಸರದಿ ಸಾಲಿನಲ್ಲಿ ನಿಂತು ಭಕ್ತರು ದರ್ಶನ ಪಡೆದುಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಬೆಳಂಬೆಳಿಗ್ಗೆಯೇ ದೇವಸ್ಥಾನದ ಆವರಣಕ್ಕೆ ಆಗಮಿಸಿದ ಭಕ್ತರು ಆವರಣದಲ್ಲಿಯೇ ಎರಡ್ಮೂರು ಸಾಲುಗಳಲ್ಲಿ ನಿಂತು ದರ್ಶನ ಪಡೆದುಕೊಳ್ಳಲಾರಂಭಿಸಿದರು. ಎಲ್ಲಿ ನೋಡಿದರಲ್ಲಿ ಭಕ್ತರು ಕಾಣುತ್ತಿದ್ದರು. ಕಾಯಿ, ಕರ್ಪುರದೊಂದಿಗೆ ನೈವೇದ್ಯ ತೋರಿಸುವ ಮೂಲಕ ಪುನೀತರಾದರು.
ಕೇವಲ ಕಲಬುರ್ಗಿಯವರಷ್ಟೇ ಅಲ್ಲ, ನೆರೆಹೊರೆಯ ಕಲ್ಯಾಣ ಕರ್ನಾಟಕದ ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ್, ಬಳ್ಳಾರಿ, ವಿಜಯನಗರ, ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ ಸೇರಿದಂತೆ ದೇಶದ ವಿವಿಧ ರಾಜ್ಯ, ಹೊರರಾಜ್ಯಗಳಿಂದಲೂ ಸಹ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದರು. ಆರಂಭದ ಸೋಮವಾರವಾಗಿದ್ದರಿಂದ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.