ಸುಗ್ರೀವಾಜ್ಞೆ ಮೂಲಕ ಒಳಮೀಸಲಾತಿ ಜಾರಿಗೆ ಮಾದಿಗ ಸಮಾಜದ ಒತ್ತಾಯ
ಕಲಬುರಗಿ:ಆ.5: ಸುಗ್ರೀವಾಜ್ಞೆ ಮೂಲಕ ಒಳ ಮೀಸಲಾತಿಯನ್ನು ತ್ವರಿತವಾಗಿ ಜಾರಿಗೆ ತರಬೇಕು ಎಂದು ಮಾದಿಗ ಸಮಾಜದ ಜಿಲ್ಲಾಧ್ಯಕ್ಷ ಪರಮೇಶ್ವರ್ ಖಾನಾಪೂರ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ಎ.ಜೆ. ಸದಾಶಿವ್ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಜಾರಿ ಮಾಡುವುದಕ್ಕೆ ಆಯಾ ರಾಜ್ಯಗಳಿಗೆ ಅಧಿಕಾರವನ್ನು ಕೊಡಲಾಗಿದೆ. ಪರಿಶಿಷ್ಟ ಜಾತಿ ಜನಾಂಗಕ್ಕೆ ಒಳಮೀಸಲಾತಿ ನೀಡಿದರೆ ಸಮಾನತೆಗೆ ಯಾವುದೇ ರೀತಿಯಲ್ಲಿ ಧಕ್ಕೆ ಆಗುವುದಿಲ್ಲ. ಸಂವಿಧಾನದ ಆಶಯದಂತೆ ಸದಾಶಿವ್ ಆಯೋಗದ ವರದಿ ಜಾರಿ ಮಾಡಿದರೆ ಯಾವುದೇ ರೀತಿಯಲ್ಲಿ ಕಾನೂನಿನ ಉಲ್ಲಂಘನೆಯಾಗುವುದಿಲ್ಲ ಎಂದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪು ಸ್ವಾಗತಾರ್ಹ. ಹಾಗಾಗಿ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ್ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ಅತೀ ಹೆಚ್ಚು ಮಾದಿಗ ಜನಾಂಗವಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯಬೇಕೆಂದು ಕಳೆದ ಮೂವತ್ತು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದು, ಈಗ ಆ ಹೋರಾಟಕ್ಕೆ ಬೆಲೆ ಬಂದಿದೆ ಎಂದರು.
ಪರಿಶಿಷ್ಟ ಜಾತಿಗೆ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ಸಾಮಾಜಿಕ ನ್ಯಾಯದ ಕುರಿತು ರಾಜ್ಯ ಸರ್ಕಾರವು ಬದ್ಧತೆ ಸಾಬೀತುಪಡಿಸಬೇಕು. ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ತಕ್ಷಣ ಸದಾಶಿವ್ ಆಯೋಗದ ವರದಿ ಜಾರಿಗೆ ತರುವುದಾಗಿ ಆಶ್ವಾಸನೆ ಕೊಟ್ಟಿತ್ತು. ಈಗ ಆ ಸಮಯ ಬಂದಿದೆ. ತಕ್ಷಣ ಒಳಮೀಸಲಾತಿಯನ್ನು ಜಾರಿಗೆ ತರಬೇಕು ಎಂದು ಅವರು ಒತ್ತಾಯಿಸಿದರು.
ಈಗಾಗಲೇ ಪರಿಶಿಷ್ಟ ಜಾತಿಯ ಮೀಸಲು ವರ್ಗೀಕರಣಕ್ಕೆ ಸರ್ವೋಚ್ಛ ನ್ಯಾಯಾಲಯ ನೀಡಿರುವ ಆದೇಶವನ್ನು ತಕ್ಷಣವೇ ಅನುಷ್ಠಾನಕ್ಕೆ ತರುವುದಾಗಿ ತೆಲಂಗಾಣ ಕಾಂಗ್ರೆಸ್ ಸರ್ಕಾರ ಘೋಷಿಸಿದೆ. ರಾಜ್ಯ ಸರ್ಕಾರವೂ ಸಹ ಯಾವುದೇ ನೆಪವೊಡ್ಡಿ ಅನುಷ್ಠಾನಕ್ಕೆ ತಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಮ್ಮ ಸಾಮಾಜಿಕ ನ್ಯಾಯದ ಬದ್ಧತೆಯನ್ನು ಎತ್ತಿ ತೋರಿಸಬೇಕು ಎಂದು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಲಿಂಗರಾಜ್ ತಾರಫೈಲ್, ಶ್ಯಾಮ್ ನಾಟೀಕಾರ್, ನಾಗರಾಜ್ ಗುಂಡಗುರ್ತಿ, ರಾಜು ವಾಡೇಕರ್, ದಶರಥ್ ಕಲಗುರ್ತಿ, ಬಸವರಾಜ್ ಜವಳಿ, ಬಂಡೇಶ್ ರತ್ನಡಗಿ, ಪ್ರಕಾಶ್ ಮಾಳಗಿ, ಶ್ರೀಮಂತ್ ಭಂಡಾರ್ ಮುಂತಾದವರು ಉಪಸ್ಥಿತರಿದ್ದರು.