ಗ್ರಾಮ ಆಡಳಿತಾಧಿಕಾರಿ ಪರೀಕ್ಷೆಯಲ್ಲಿ ದೋಷ : ಅಭ್ಯರ್ಥಿಗಳ ಬೇಸರ
ಬೆಂಗಳೂರು,ಸೆ.೩೦- ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ರಾಜ್ಯಾದ್ಯಂತ ನಿನ್ನೆ ನಡೆಸಿದ ಗ್ರಾಮ ಆಡಳಿತಾಧಿಕಾರಿ (೧,೦೦೦ ಹುದ್ದೆಗಳು) ಮತ್ತು ಜಿಟಿಟಿಸಿ (೯೮ ಹುದ್ದೆಗಳು) ಹುದ್ದೆಗಳಿಗೆ ಕಡ್ಡಾಯ ಕನ್ನಡ ಪರೀಕ್ಷೆಯಲ್ಲಿ ಹಲವು ಅವಾಂತರಗಳು ಕಂಡುಬಂದಿವೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆ ಮೇಲೆ ಪರೀಕ್ಷೆ ನಡೆಸುತ್ತಾ ಬಂದಿದೆ ಆದರೆ ಆದ ತಪ್ಪುಗಳನ್ನು ತಿದ್ದಿಕೊಳ್ಳುವ ಬದಲು ಮತ್ತೆ ಹೊಸ ಹೊಸ ಗೊಂದಲ ಸೃಷ್ಟಿಸಿದೆ.ಪದೇ ಪದೇ ಎಡವುತ್ತಲೆ ಇರುತ್ತದೆ.
ಇದೀಗ ನಿನ್ನೆ ನಡೆದ ಕನ್ನಡ ಭಾಷೆಯ ಕಡ್ಡಾಯ ಪ್ರಶ್ನೆ ಪತ್ರಿಕೆಯ ಮುಖಪುಟದಲ್ಲಿ ದೋಷ ಕಂಡುಬಂದಿದೆ, ಈ ಕುರಿತು ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಶ್ನೆ ಪತ್ರಿಕೆಯನ್ನು ಬೆಳಗ್ಗೆ ೧೦.೨೫ರ ನಂತರ ನೀಡಲಾಗುವುದು ಬದಲಿಗೆ ರಾತ್ರಿ ೧೦.೨೫ರ ನಂತರ ನೀಡಲಾಗುವುದು ಎಂದು ಮುದ್ರಿಸಲಾಗಿದೆ.
ಪ್ರಶ್ನೆಪತ್ರಿಕೆ ನೀಡಿದ ನಂತರ ಮೂರನೇ ಗಂಟೆ ಬೆಳಿಗ್ಗೆ ೧೦.೩೦ ಕ್ಕೆ ಎಂದು ಮುದ್ರಿಸುವ ಬದಲು, ಮಧ್ಯಾಹ್ನ ೧೦.೩೦ ಎಂದು ಮುದ್ರಿಸಲಾಗಿದೆ.
ಮಧ್ಯಾಹ್ನ ೧೨.೩೦ ಕ್ಕೆ ಕೊನೆಯ ಗಂಟೆಯ ನಂತರ ಉತ್ತರಿಸುವುದನ್ನು ನಿಲ್ಲಿಸಿ ಎಂದು ಮುದ್ರಿಸುವ ಬದಲು ಸಂಜೆ ೧೨.೩೦ ನಂತರ ಉತ್ತರಿಸುವುದನ್ನು ನಿಲ್ಲಿಸಿ ಎಂದು ಮುದ್ರಿಸಲಾಗಿದೆ.
ಇದಲ್ಲದೆ, ಓಎಂಆರ್ ಶೀಟ್ ನಲ್ಲೂ ಸಹ ಕನ್ನಡ ಅಕ್ಷರಗಳಲ್ಲಿಯೂ ದೋಷಗಳು ಕಂಡುಬಂದಿವೆ. ಮಾಡಬೇಕಾದ್ದನ್ನು ಬೇಡ ಕಪ್ಪು ಕಷ್ಟು ಎಂದು ಮೊದಲು ಮೊದಲಾ ಎಂದು ಮುದ್ರಿಸಲಾಗಿದೆ.
ಇತ್ತೀಚೆಗೆ ಕೆಪಿಎಸ್ ಸಿ ಗೆಜೆಟೆಡ್ ಪ್ರೊಬೇಷನರಿ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆಗಳ ಅನುವಾದದಲ್ಲಿ ತಪ್ಪು ಮಾಡಿದ್ದರೂ ಕೆಇಎ ಎಚ್ಚೆತ್ತುಕೊಂಡಿಲ್ಲ. ಕನ್ನಡ ಪರೀಕ್ಷೆಯಲ್ಲಿಯೇ ಕನ್ನಡವನ್ನು ತಪ್ಪಾಗಿ ಮುದ್ರಿಸಲಾಗಿದೆ.
ಇದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಕೆಲ ಅಭ್ಯರ್ಥಿಗಳು ಕೆಇಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.