ಕಣ್ಣು ಜೀವನದ ಬೆಳಕು
ಭಾಲ್ಕಿ:ಆ.5: ಪಂಚೇಂದ್ರಿಯಗಳಲ್ಲಿ ಕಣ್ಣು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ. ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ .ಕಣ್ಣು ಪ್ರತಿಯೊಬ್ಬರ ಜೀವನದ ಬೆಳಕಾಗಿದೆ ಎಂದು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಓಂ ಶಾಂತಿಯ ರಾಧಿಕಾ ಬೆಹನಜಿ ಹೇಳಿದರು.
ಇಲ್ಲಿನ ಪವನ ಆಪ್ಟಿಕಲ್ ಮುಂಭಾಗದಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್(ಆರ್‍ಐ 3160) ಮತ್ತು ವ್ಹಿಜನ ಫೌಂಡೇಶನ ಆಫ್ ಇಂಡಿಯಾ ಹಾಗೂ ಉದಯಗಿರಿ ಲಾಯನ್ಸ್ ನೇತ್ರಾಲಯ ಉದಗೀರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಉಚಿತ ಮೋತಿ ಬಿಂದು ಶಸ್ತ್ರಕ್ರಿಯೆ ಮತ್ತು ನೇತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಬೆಳಕು ನೀಡುವ ಕಾರ್ಯ ಕಣ್ಣು ಮಾಡುತ್ತದೆ.ಕಣ್ಣು ಕಳೆದುಕೊಂಡರೆ ವ್ಯಕ್ತಿ ಪರಾವಲಂಬಿ ಜೀವನ ಸಾಗಿಸಬೇಕಾಗುತ್ತದೆ. ಕಣ್ಣಿನ ದೃಷ್ಟಿ ಕುರಿತು ಮುನ್ನೇಚರಿಕೆ ವಹಿಸುವುದು ಅಗತ್ಯ. ಗ್ರಾಮೀಣ ಭಾಗದ ಜನರಿಗೆ ಇಂತಹ ಶಿಬಿರಗಳು ವರದಾನವಾಗಿವೆ. ರೋಟರಿ ಕ್ಲಬ್‍ನವರ ಸಾಮಾಜಿಕ ಕಾರ್ಯಗಳು ಶ್ಲಾಘನೀಯವಾಗಿವೆ ಎಂದು ಹೇಳಿದರು.
ನೇತ್ರ ತಜ್ಞ ಡಾ.ಉಮೇಶ ವರ್ಮಾ ಮಾತನಾಡಿ, ನೀವು ಉತ್ತಮ ದೃಷ್ಟಿಯನ್ನು ಹೊಂದಿದ್ದರೂ ಕೂಡ ವರ್ಷಕ್ಕೊಮ್ಮೆಯಾದರೂ ದೃಷ್ಟಿಯನ್ನು ಪರೀಕ್ಷಿಸಿಕೊಳ್ಳಬೇಕು.ಪೌಷ್ಠಿಕಾಂಶ ಹೆಚ್ಚಿನ ಸೇವನೆಯಿಂದ ಕಣ್ಣಿನ ದೃಷ್ಠಿ ದೀರ್ಘಾಯುವರೆಗೆ ಕಾಯ್ದುಕೊಂಡು ಹೋಗಬಹುದು. ಕಣ್ಣಿನ ಚಿಕಿತ್ಸೆಗೆ ನಿರ್ಲಕ್ಷ್ಯ ಮಾಡಿದರೆ ಭವಿಷ್ಯದ ಜೀವನ ಕತ್ತಲಮಯವಾಗುತ್ತದೆ ಎಂದು ತಿಳಿಸಿದರು.
ತಪಾಸಣೆ: ಕಣ್ಣಿನ ರೋಗಿಗಳನ್ನು ತಪಾಸಣೆ ನಡೆಸಿ, ರೋಗಿಗಳನ್ನು ಮೋತಿಬಿಂದು ಶಸ್ತ್ರಕ್ರಿಯೆಗೆ ಆಯ್ಕೆ ಮಾಡಿಕೊಂಡರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಸಂಜಯಕುಮಾರ ಪಂಡರಗೆರೆ, ಖಜಾಂಚಿ ಡಾ.ಸಜ್ಜಲ ಬಳತೆ, ಟೆಕ್ನಿಶಿಯನ್ ರೋಹಿತ್ ಬೆದ್ರೆ, ಸಲಹೆಗಾರ ರಾಹುಲ ಅಲ್ಲಮಕೇರೆ ಸೇರಿದಂತೆ ರೋಟರಿ ಸದಸ್ಯರು ಉಪಸ್ಥಿತರಿದ್ದರು.
ರೋ.ಬಸವ ಮಾಲಿಪಾಟೀಲ ಸ್ವಾಗತಿಸಿದರು. ಪ್ರಾಚಾರ್ಯ ಅಶೋಕ ರಾಜೋಳೆ ನಿರೂಪಿಸಿದರು. ರೋಟರಿ ಕ್ಲಬ್ ಕಾರ್ಯದರ್ಶಿ ದತ್ತುಕುಮಾರ ಮೆಹಕ್ರೆ ವಂದಿಸಿದರು.