ಪ್ರಜಾಪ್ರಭುತ್ವ ಬಲವರ್ಧನೆಯಲ್ಲಿ ಪತ್ರಕರ್ತರ ಪಾತ್ರ ಅಪಾರ: ಶಿವಶರಣಪ್ಪ ವಾಲಿ
ಬೀದರ್:ಆ.5: ಪ್ರಜಾಪ್ರಭುತ್ವ ಬಲವರ್ಧನೆಯಲ್ಲಿ ಪತ್ರಕರ್ತರ ಪಾತ್ರ ಅಪಾರವಾಗಿದೆ ಎಂದು ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಹೇಳಿದರು.
ರವಿವರ ನಗರದ ಜನವಾಡ ರಸ್ತೆಯಲ್ಲಿ ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಪ್ರಜಾಪ್ರಭುತ್ವದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗಗಳ ಮಹತ್ವ ಎತ್ತಿ ಹಿಡಿಯುವ ಕಾರ್ಯ ಪತ್ರಕರ್ತರದ್ದಾಗಿದೆ. ಮಾಧ್ಯಮ ಕ್ಷೇತ್ರ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಎಂಬುದು ಶುದ್ದ ಸುಳ್ಳು. ಆನಪ್ರತಿನಿಧಿಗಳು ಹಾಗೂ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಇದನ್ನು ಉಲ್ಲೇಖ ಮಾಡಿದರೆ, ಅಧಿಕಾರಿಗಳು ತಾವು ಮಾಡಿದ ಭ್ರಷ್ಟಾಚಾರ ಹೊರ ಬರಬಾರದೆಂದು ಪತ್ರಕರ್ತರಿಗೆ ಖುಸಿ ಪಡಿಸಲು ಪ್ರಜಾಪ್ರಭುತ್ವದಲ್ಲಿ ಪತ್ರಕರ್ತರಿಗೆ ನಾಲ್ಕನೆ ಅಂಗ ಎನ್ನುವರು ಎಂದು ಹೇಳಿ ನಮ್ಮನ್ನು ಮೂರ್ಖರನ್ನಾಗಿ ಮಾಡುವರು. ಆದರೆ ನಮಗೂ ಸಾಮಾನ್ಯ ಜನರಿಗೂ ಯಾವುದೇ ವ್ಯತ್ಯಾಸವಿಲ್ಲ ಎಂಬ ಸತ್ಯ ನಮಗೆ ಗೊತ್ತಿರಲಿ ಎಂದರು.
ಇಂದು ನಮ್ಮಲ್ಲೂ ಸಹ ಗುಂಪುಗಾರಿಕೆ, ಒಳಜಗಳಗಳು, ಅಸುಯೆ, ಅಹಂಕಾರ ಹೆಚ್ಚಾಗತೊಡಗಿದೆ. ಇದರಿಂದ ನಮ್ಮ ಧರ್ಮ ಮರೆತು ನಾವು ಅನ್ಯರಂತೆ ದಾರಿ ತಪ್ಪುತ್ತಿದ್ದೇವೆ. ಸಮಾಜ ಯಾವತ್ತು ನಮ್ಮನ್ನು ಬಹು ಗೌರವದಿಂದ ಕಾಣುತ್ತದೆ. ಅದನ್ನು ಉಳಿಸಿಕೊಂಡು ನಮ್ಮ ವೃತ್ತಿ ಧರ್ಮ ಕಾಪಾಡಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವೆಂದು ತಿಳಿಸಿದರು.
ಬ್ರಹ್ಮಾಕುಮಾರಿ ಕೇಂದ್ರದಲ್ಲಿ ಒಟ್ಟು 20 ವಿಭಾಗಗಳಿವೆ. ಒಂದು ಕಾಲದಲ್ಲಿ ಮಾಧ್ಯಮ ವಿಭಾಗ ಇರಲಿಲ್ಲ. ಆ ಸಮಯದಲ್ಲಿ ಮಾಧ್ಯಮ ವಿಭಾಗ ಆರಂಭಿಸಲು ತಾನು ಮೌಂಟ್ ಅಬುದಲ್ಲಿ ಸಲಹೆ ನೀಡಿದ ಕಾರಣ ಇಂದು ಪ್ರತಿ ವರ್ಷ ಮಾಧ್ಯಮ ವಿಭಾಗದಿಂದ ಸಮ್ಮೇಳನ ನಡೆಯುತ್ತಿದೆ. ಇದು ಆರಂಭವಾಗಬೇಕಾದರೆ ಬೀದರ್ ಪತ್ರಕರ್ತರ ಪರಿಶ್ರಮವಿದೆ. ಆದ್ದರಿಂದ ಜೀವನದಲ್ಲಿ ಒಮ್ಮೆಯಾದರೂ ಮೌಂಟ್ ಅಬುಗೆ ಹೋಗಿ ಮೂರು ದಿವಸ ಉಳಿಸಿಕೊಂಡು ಬರಬೇಕು ಎಂದು ಹೇಳಿದರು.
ಬ್ರಹ್ಮಾಕುಮಾರಿ ಕೇಂದ್ರ ಪಾವನಧಾಮದ ಸಂಚಾಲಕರಾದ ಬಿ.ಕೆ ಪ್ರತಿಮಾ ಬಹೆನ್‍ಜಿ ಮಾತನಾಡಿ, ಮಾಧ್ಯಮ ಕ್ಷೇತ್ರ ಈ ಸಮಾಜದ ಬಹು ದೊಡ್ಡ ಜವಾಬ್ದಾರಿ ಸಂಸ್ಥೆಯಾಗಿದೆ. ಪತ್ರಕರ್ತನ ಒಂದು ಬರವಣಿಗೆ ಒಂದು ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತದೆ. ಅದೇ ನಮ್ಮ ಬರವಣಿಗೆ ತಪ್ಪಿನಿಂದ ಅದು ಒಡೆಯಲೂ ಬಹುದು. ಹಾಗಾಗಿ ನಮ್ಮಲ್ಲಿ ಸದಾ ಸಕಾರಾತ್ಮಕ ವಿಚಾರಗಳು ಕೇಂದ್ರಕೃತವಾಗಿದ್ದರೆ ಸದಾ ಸಕಾರಾತ್ಮಕ ಬರವಣಿಗೆ ಮಾತ್ರ ಹೊರಹೊಮ್ಮಲು ಸಾಧ್ಯವಿದೆ. ಒಂದು ಸತ್ಯ ಹೇಳಬೇಕಾದರೆ ನಮ್ಮಲ್ಲಿ ಸಭ್ಯತೆ ಅಗತ್ಯವಿದೆ ಎಂದವರು ನುಡಿದರು.
ಪ್ರತಿ ವರ್ಷ ಮೌಂಟ್ ಅಬುದಲ್ಲಿ ಮಾಧ್ಯಮ ಸಮ್ಮೇಳನ ಜರುಗುತ್ತಿರುವಂತೆ ಈ ವರ್ಷ ಸಹ ಆನಂದ ಸರೋವರದಲ್ಲಿ ಮಾಧ್ಯಮ ಸಮ್ಮೇಳನ ನಡೆಯುತ್ತಿದ್ದು, ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಅವರ ನೇತೃತ್ವದಲ್ಲಿ ಇನ್ನು ಹೆಚ್ಚಿನ ಪತ್ರಕರ್ತರು ಸಪ್ಟೆಂಬರ್ 26ರಿಂದ 30ರ ವರೆಗೆ ನಡೆಯುವ ರಾಷ್ಟ್ರೀಯ ಮಾಧ್ಯಮ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.
ಕೇಂದ್ರದ ಹಿರಿಯ ರಾಜಯೋಗ ಶಿಕ್ಷಕಿ ಬಿ.ಕೆ ಗುರುದೇವಿ ಅಕ್ಕನವರು ಮಾತನಾಡಿ, ಮಾಧ್ಯಮ ಕ್ಷೇತ್ರ ಸಕಾರಾತ್ಮಕ ಪರಿವರ್ತನೆಯಾಗಲು ಭಾವನೆ ಹಾಗೂ ಬರವಣಿಗೆ ಎರಡರಲ್ಲೂ ಬದಲಾವಣೆ ಅಗತ್ಯವಿದೆ. ಜಗದ ಉದ್ದಾರ ಮಾಡಲು ಹೊರಟಿರುವ ಮಾಧ್ಯಮದವರು ಮೊದಲು ತಮ್ಮ ಉದ್ದಾರ ಮಾಡಿಕೊಳ್ಳಬೇಲು. ಅದಕ್ಕಾಗಿ ಸದಾ ಸಕಾರಾತ್ಮಕ ಚಿಂತನೆ, ಸಜ್ಜನರ ಸಮಾಗಮ, ಸದುವಿನಯತೆ ಸೇರಿದಂತೆ ಸಪ್ತ ಸತ್ಯಗಳನ್ನು ಮೈಗೂಡಿಸಿಕೊಂಡು ವಿಶ್ವ ಪರಿವರ್ತಕರಾಗನೇಕೆಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ವೆಂಕಟೆಶ ಮೋರ್ಖಂಡಿ, ಕರಣಕುಮಾರ ಚಂದನ್, ರಾಜೆಶ ಮುಗಟೆ, ಸಂಜುಕುಮಾರ ಬುಕ್ಕಾ, ನಾಗಶೆಟ್ಟಿ ಧರಂಪುರ, ಬಸವರಾಜ ಕಾಮಶೆಟ್ಟಿ, ಎಮ್.ಮಸೂದ್, ದೀಪಕ ಮನ್ನಲ್ಳಿ, ವಿಜಯಕುಮಾರ ಪಟೀಲ ಚಾಂಬೋಳ, ಸುನಿಲ ಹೊನ್ನಳ್ಳಿ ಸೇರಿದಂತೆ ಸುಮಾರು 50ಕ್ಕೂ ಅಧಿಕ ಪತ್ರಕರ್ತರನ್ನು ಬ್ರಹ್ಮಾಕುಮಾರಿ ಕೇಂದ್ರದಿಂದ ಸನ್ಮಾನಿಸಲಾಯಿತು.
ಕೇಂದ್ರದ ಸಹೋದರ, ಸಹೋದರಿಯರು, ಮಾಧ್ಯಮದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.