ಸಮಾಜ ಸೇವಾ ಸಮಿತಿಯಿಂದ ನಾಟಕ ಕಲಾವಿದರಿಗೆ ಬಟ್ಟೆ ವಿತರಣೆ
ಬೀದರ್: ಆ.5:ಸಮಾಜ ಸೇವಾ ಸಮಿತಿ ಬೀದರ ಜಿಲ್ಲಾ ಶಾಖೆಯ ವತಿಯಿಂದ ಶ್ರೀ ಶಿರಡಿ ಸಾಯಿ ಬಾಬಾ ನಾಟಕ ಕಂಪನಿಯ ಮಹಿಳಾ ಕಲಾವಿದರಿಗೆ ಹೊದಿಕೆ, ಸೀರೆ, ಬಳೆ, ಅರಿಶಿಣ ಕುಂಕುಮ ವಿತರಣೆ ಮಾಡಲಾಯಿತು. ಜೊತೆಗೆ ಆಹಾರದ ಕಿಟ್‍ಗಳನ್ನೂ ವಿತರಿಸಲಾಯಿತು. ಸುಮಾರು 40 ವರ್ಷಗಳಿಂದ ನಾಟಕ ಕಂಪನಿಯನ್ನು ನಡೆಸಿಕೊಂಡು ಬರುತ್ತಿರುವ ಬಸವರಾಜ ಕಟ್ಟಿಮನಿ ದಂಪತಿಗಳಿಗೆ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇದೇ ವೇಳೆ ಮಾತನಾಡಿದ ಸಮಿತಿಯ ಜಿಲ್ಲಾ ಶಾಖೆಯ ಕಾರ್ಯದರ್ಶಿ ಬಿಎಂ ಶಶಿಕಲಾ ಮಾತನಾಡಿ, ನಾಟಕ ಕಂಪನಿಯ ಮಡ ಮಹಿಳಾ ಕಲಾವಿದೆಯರು ಪಂಚಮಿ ಹಬ್ಬಕ್ಕೆ ತವರು ಮನೆಗೆ ಹೋಗುವುದಿಲ್ಲ. ಹೀಗಾಗಿ ತಾಯಿಯ ಸ್ಥಾನದಲ್ಲಿ ನಿಂತು ಇಂದು ನಮ್ಮ ಸಮಿತಿ ವತಿಯಿಂದ ಹೊದಿಕೆ ಹಾಗೂ ಆಹಾರದ ಕಿಟ್‍ಗಳನ್ನು ವಿತರಣೆ ಮಾಡಲಾಗಿದೆ ಎಂದು ತಿಳಿಸಿದರು.
ಸಮಿತಿ ಹಿತೈಷಿಗಳು ಹಾಗೂ ವಿಶ್ವ ಹಿಂದೂ ಪರಿಷತ್ತಿನ ಪ್ರಾಂತೀಯ ಸದಸ್ಯರಾದ ರಾಮಕೃಷ್ಣನ್ ಸಾಳೆ ಮಾತನಾಡಿ, ಸಮಾಜ ಸೇವಾ ಸಮಿತಿ ವತಿಯಿಂದ ಪ್ರತೀ ವರ್ಷ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬರಲಾಗುತ್ತಿದೆ. ವಿನೂತನ ರೀತಿಯಲ್ಲಿ ಹೊರಗಿನಿಂದ ಬಂದ ಶ್ರೀ ಶಿರಡಿ ಸಾಯಿ ಬಾಬಾ ನಾಟಕ ಕಂಪನಿಯ ಮಹಿಳಾ ಕಲಾವಿದೆಯರಿಗೆ ಬಾಗಿಣ, ಕುಂಕುಮ ಅರಿಶಿಣ ಹಾಗೂ ಹೊದಿಕೆ ವಿತರಿಸಲಾಗಿದೆ. ಪುರುಷ ಕಲಾವಿದರಿಗೆ ಸನ್ಮಾನಿಸಿ ಗೌರವಿಸಲಾಗಿದೆ. ಅವರು ಇನ್ನೂ ಉತ್ತರೋತ್ತರವಾಗಿ ಬೆಳೆಯಲಿ. ಭಗವಂತನ ಆಶಿರ್ವಾದ ಕಲಾವಿದರ ಮೇಲಿರಲಿ ಎಂದು ಶುಭ ಹಾರೈಸಿದರು.
ಶ್ರೀ ಶಿರಡಿ ಸಾಯಿ ಬಾಬಾ ನಾಟಕ ಕಂಪನಿಯ ಮಾಲಿಕರಾದ ಬಸವರಾಜ ಕಟ್ಟಿಮನಿ ಮಾತನಾಡಿ, ಇಂದು ಸಮಾಜ ಸೇವಾ ಸಮಿತಿಯವರು ನಮಗೆ ನೀಡಿದ ಸಹಕಾರದಿಂದ ಕಲಾವಿದರಿಗೆ ಪ್ರೋತ್ಸಾಹ ನೀಡಿದಂತಾಗಿದೆ. ಅವರಿಗೆ ನಮ್ಮ ಕೃತಜ್ಞತೆಗಳು. ಆದರೆ ಈ ಹಿಂದೆ ಸರ್ಕಾರ ನಮಗೆ ಹೆಚ್ಚು ಅನುದಾನ ನೀಡುತಿತ್ತು. ಆದರೆ ಮೊದಲಿಗಿಂತಲೂ ಅರ್ಧದಷ್ಟು ಅನುದಾನ ಕಡಿತಗೊಳಿಸಿದೆ. ಆದ್ದರಿಂದ ದಯವಿಟ್ಟು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರು ಕಲಾವಿದರಿಗೆ ಅನುದಾನ ನೀಡಿ ಸಹಕರಿಸಬೇಕೆಂದು ಮನವಿ ಮಾಡಿಕೊಂಡರು.
ಇದೇ ವೇಳೆ ಕಾರ್ಯಕ್ರಮದಲ್ಲಿ ಸಮಿತಿಯ ಸಂಚಾಲಕಿ ಮಹಾದೇವಿ, ಪ್ರಮುಖರಾದ ಕಲ್ಪನಾ ಸ್ವಾಮಿ, ಪತ್ರಕರ್ತ ಶಿವಕುಮಾರ ಸ್ವಾಮಿ, ಡಾ. ವೈಜಿನಾಥ ಬಿರಾದಾರ, ಭಾಗಿರಥಿ ಕೊಂಡಾ, ವೇದಮಣಿ, ಮಾಧವ ವಾಡೇಕರ್ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.