ನಿರಂಜನರು ಕನ್ನಡದ ಅನನ್ಯ ಪ್ರತಿಭೆ: ರೇವಣಸಿದ್ದಪ್ಪ ದೊರೆ
ಬಸವಕಲ್ಯಾಣ: ಆ.5:ನಿರಂಜನರು ಕನ್ನಡದ ಅನನ್ಯ ಪ್ರತಿಭೆ. ಸಾಹಿತ್ಯ ಮತ್ತು ರಾಜಕಾರಣ ಬೇರೆಯಾಗಿ ಕಾಣದ ಹಲವು ಲೇಖಕರಲ್ಲಿ ನಿರಂಜನರು ಒಬ್ಬರು ಎಂದು ಬಾಗಲಕೋಟೆ ಅಧ್ಯಾಪಕ ರೇವಣಸಿದ್ದಪ್ಪ ದೊರೆಗಳ್ ಹೇಳಿದರು.
ಡಾ. ಜಯದೇವಿತಾಯಿ ಲಿಗಾಡೆ ಪ್ರತಿಷ್ಠಾನದಿಂದ ನಗರದ ಸಂಜೀವಿನಿ ಆಸ್ಪತ್ರೆಯ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ನಿರಂಜನ ಜನ್ಮ ಶತಮಾನೋತ್ಸವ ಪ್ರಯುಕ್ತ ನಿರಂಜನರ ಸಾಹಿತ್ಯದ ತಾತ್ವಿಕತೆ ಕುರಿತು ಪ್ರತಿಷ್ಠಾನದ 81ನೇ ಉಪನ್ಯಾಸ ಸಮಾರಂಭದಲ್ಲಿ ಮಾತನಾಡಿದ ಅವರು, ಬರಹದಿಂದಲೇ ಬದುಕುತ್ತೇನೆ ಎಂದು ನಂಬಿದ ಬಹುದೊಡ್ಡ ಬರಹಗಾರ ನಿರಂಜನರು ಎಂದ ಹೇಳಿದರು.
ಕನ್ನಡದ ಹಲವು ಲೇಖಕರು ಪತ್ರಕರ್ತರಾಗಿದ್ದರು.ಅವರ ಬರಹ ಪತ್ರಿಕೆ ಬರಹ,ಅಂಕಣ ಹಾಗೂ ಸೃಜನಶೀಲ ಬರಹವು ಬರೆಯುತ್ತಿದ್ದರು. ನಿರಂಜನರು ಹಾಗೂ ಅವರ ಪತ್ನಿ ಅನುಪಮಾ ನಿರಂಜನ ಕನ್ನಡದ ಶ್ರೇಷ್ಠ ಬರಹಗಾರ ದಂಪತಿ . ಬಾಲ್ಯದಲ್ಲಿ ಕತೆಗಳು ಬರೆದ ನಿರಂಜನರು ಕಮ್ಯುನಿಸ್ಟ್ ತತ್ವ ಸಿದ್ಧಾಂತಗಳನ್ನು ನಿರಂತರವಾಗಿ ಉಳಿಸಿಕೊಂಡು ಬಂದಿದ್ದರು ಎಂದರು.
ನಿರಂಜನರು ಬರೆದ ಕೊನೆಯ ಗಿರಾಕಿ ಕತೆಯನ್ನು ವಿಮರ್ಶಿಸಿದ ಕಲಬುರ್ಗಿಯ ಅಧ್ಯಾಪಕ ಡಾ.ಶಿವಾಜಿ ಮೇತ್ರೆ ಅವರು, ನಿರಂಜನರ ಈ ಕತೆ ಮಾತು ಬಾರದ, ಅಸಹಾಯಕ, ಬಡ ಹುಡುಗಿಯನ್ನು ಪುರುಷ ಪ್ರಧಾನ ವ್ಯವಸ್ಥೆ ಎಸಗಿದ ದೌರ್ಜನ್ಯ ಹಾಗೂ ದಾರುಣತೆಯನ್ನು ಬಿಂಬಿಸುತ್ತದೆ. ಕನ್ನಡದ ಶ್ರೇಷ್ಠ ಕತೆಗಳ ಸಾಲಿಗೆ ಸೇರುವ ಈ ಕತೆ ಸಮಾಜದ ವಿಕೃತ ಮುಖವನ್ನು ಬಿಂಬಿಸುತ್ತದೆ ಎಂದರು.
ಅಧ್ಯಾಪಕ ಡಾ. ಭೀಮಾಶಂಕರ ಬಿರಾದಾರ ಮಾತನಾಡಿ, ಜನ ಚಳುವಳಿ ಹಾಗೂ ಸಾಮಾಜಿಕ ಬದುಕಿನ ನೋವಿನ, ಅಸಹಾಯಕತೆಯ, ಸಂಘರ್ಷದ ಹಲವು ಮುಖಗಳು ನಿರಂಜನರ ಸೃಜನಶೀಲ ಕೃತಿಗಳಲ್ಲಿ ಅಡಕಗೊಂಡಿವೆ. ಕನ್ನಡದ ಪ್ರಗತಿಶೀಲ ಚಳುವಳಿಯ ಪ್ರಮುಖ ಧ್ವನಿ ನಿರಂಜನರು ಎಂದರು.
ರಂಗಕರ್ಮಿ ಉಮೇಶ ಪಾಟೀಲ ನಿರಂಜನರ ಕೊನೆಯ ಗಿರಾಕಿ ಕತೆಯನ್ನು ನಾಟಕೀಯವಾಗಿ ಓದಿದರು.
ಪ್ರತಿಷ್ಠಾನದ ಅಧ್ಯಕ್ಷ ಎಸ್.ಜಿ.ಹುಡೇದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಡಾ. ಬಸವರಾಜ ಸ್ವಾಮಿ, ಪ್ರತಿಷ್ಠಾನದ ನಿರ್ದೇಶಕ ಬಕ್ಕಯ್ಯ ಸ್ವಾಮಿ, ಭೀಮಾಶಂಕರ ಮಾಶಾಳಕರ, ನಾಗಪ್ಪ ನಿಣ್ಣೆ, ಬಸವಣ್ಣಪ್ಪ ನೆಲೋಗಿ, ವೀರಶೆಟ್ಟಿ ಪಾಟೀಲ್, ಶಿವಪುತ್ರ ಸಂಗನಬಸವ, ಸೋಮನಾಥ ಡೊಣಗಾರೆ, ಶಿವಪುತ್ರ ಮಿರಾಜದಾರ
ಮೊದಲಾದವರು ಇದ್ದರು.
ನಾಗೇಂದ್ರ ಬಿರಾದಾರ ರಂಗಗೀತೆ ಹಾಡಿದರು.
ಚಂದ್ರಕಾಂತ ಅಕ್ಕಣ್ಣ ಸ್ವಾಗತಿಸಿದರು.
ಪ್ರತಿಷ್ಠಾನದ ಕಾರ್ಯದರ್ಶಿ ದೇವೇಂದ್ರ ಬರಗಾಲೆ ನಿರೂಪಿಸಿದರು.
ಶರಣಬಸವ ಬಿರಾದಾರ ವಂದಿಸಿದರು.