ಭೀಮಾ ನದಿ ಪಾತ್ರದ ಜನರು ಎಚ್ಚರದಿಂದಿರಲು ಸೂಚನೆ
ಅಫಜಲಪುರ:ಆ.5: ಮಹಾರಾಷ್ಟ್ರದ ಉಜನಿ ಜಲಾಶಯದಲ್ಲಿ ಶೇ. 91.5% ರಷ್ಟು ನೀರು ತುಂಬಿದೆ. ಹೀಗಾಗಿ ರವಿವಾರ ಸಂಜೆ 5 ಗಂಟೆಗೆ 21,600 ಕ್ಯೂಸೆಕ್ಸ್ ನೀರನ್ನು ಭೀಮಾ ನದಿಗೆ ಹರಿ ಬಿಡಲಾಗಿದೆ. ಹಾಗೂ ವೀರ್ ಜಲಾಶಯದಿಂದ 61,923 ಕ್ಯೂಸೆಕ್ಸ್ ನೀರನ್ನು ಭೀಮಾ ನದಿಗೆ ಹರಿಸಲಾಗಿದ್ದು ಎರಡು ಜಲಾಶಯದಿಂದ ಬಿಡುಗಡೆಯಾದ ನೀರು ಮುಂದಿನ ಎರಡು ದಿನಗಳಲ್ಲಿ ಸೊನ್ನ ಬ್ಯಾರೇಜ್ ತಲುಪಬಹುದಾಗಿದೆ.
ಸದ್ಯ ಸೊನ್ನ ಬ್ಯಾರೇಜಿನ ಒಳಹರಿವು 6152 ಕ್ಸೂಸೆಕ್ಸ್ ಇದ್ದು ಮುನ್ನೆಚ್ಚರಿಕೆ ಕ್ರಮವಾಗಿ ಹೊರ ಹರಿವನ್ನು 15 ಸಾವಿರ ಕ್ಯೂಸೆಕ್ಕಿಗೆ ಹೆಚ್ಚಿಸಲಾಗಿದೆ.
ಮುಂದಿನ ಎರಡು ದಿನಗಳಲ್ಲಿ ಸೊನ್ನ ಬ್ಯಾರೇಜಿನ ಒಳಹರಿವು ಮತ್ತು ಹೊರಹರಿವು 80 ಸಾವಿರ ಕ್ಯೂಸೆಕ್ಸ್ ನಿಂದ 90 ಸಾವಿರ ಇರಬಹುದಾಗಿದೆ. ಹೀಗಾಗಿ ನದಿ ಪಾತ್ರದ ಜನರು ಜಾಗೃತಿಯಿಂದ ಇರಬೇಕು ಮತ್ತು ಜನ ಮತ್ತು ಜಾನುವಾರುಗಳು ನದಿ ತೀರಕ್ಕೆ ಹೋಗದಂತೆ ಎಚ್ಚರ ವಹಿಸಬೇಕು. ಹೀಗಾಗಿ ಸಂಬಂಧಪಟ್ಟ ಪಿಡಿಒ, ಗ್ರಾಮ ಸಹಾಯಕರು ಆಯಾ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಗ್ರಾಮಸ್ಥರಲ್ಲಿ ಅರಿವು ಮೂಡಿಸಬೇಕು ಎಂದು ಭೀಮಾ ಏತ ನೀರಾವರಿ ಕಾರ್ಯಪಾಲಕ ಅಭಿಯಂತರ ಸಂತೋಷ ಸಜ್ಜನ, ತಹಸೀಲ್ದಾರ್ ಸಂಜೀವಕುಮಾರ ದಾಸರ್, ಸಹಾಯಕ ಇಂಜಿನಿಯರ್ ಗುರುಲಿಂಗಪ್ಪ ಪಾಣೇಗಾಂವ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.