ಸ್ಕೌಟ್ಸ್ ಮತ್ತು ಗೈಡ್ ಭವನಕ್ಕೆ ಕೆಕೆಆರ್‍ಡಿಬಿಯಿಂದ 2 ಕೋಟಿ ಅನುದಾನ: ಡಾ.ಅಜಯಸಿಂಗ್
ಬೀದರ್: ಆ.5:ಭಾರತ ಸ್ಕೌಟ್ಸ್ ಮತ್ತು ಗೈಡ್ ಭವನಕ್ಕೆ ಕಲ್ಯಾಣ ಕರ್ನಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 2 ಕೋಟಿ ಅನುದಾನ ಒದಗಿಸಲಾಗುವುದೆಂದು ಮಂಡಳಿಯ ಅಧ್ಯಕ್ಷ ಡಾ.ಅಜಯ ಧರ್ಮಸಿಂಗ್ ತಿಳಿಸಿದರು.
ಶನಿವಾರ ಸಂಜೆ ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಂಸ್ಥೆ ಆಯೋಜಿಸಿದ ಡಾ.ಎಸ್.ಎಸ್ ಸಿದ್ದಾರೆಡ್ಡಿ ಸ್ಕೌಟ್ಸ್ ಭವನದ ಅಡಿಗಲ್ಲು ಹಾಗೂ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ರೇಂಜರ್ಸ್‍ಗಳ ಪ್ರೇರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಡಾ.ಗುರಮ್ಮ ಸಿದ್ದಾರೆಡ್ಡಿ ಅವರು ತಮ್ಮ ಪತಿ ದಿ.ಡಾ.ಎಸ್.ಎಸ್ ಅವರ ಸ್ಮರಣಾರ್ಥ ಸುಮಾರು ಒಂದು ಕೋಟಿ ವೆಚ್ಚ ಭರಿಸಿ ಸ್ಕೌಟ್ಸ್ ಭವನಕ್ಕೆ ನಿವೇಶನ ಒದಗಿಸಿ ಸಮಾಜಕ್ಕೆ ಹೊಸ ಸಂದೇಶ ರವಾನಿಸಿದ್ದಾರೆ. ಇವರ ನಿಸ್ವಾರ್ಥ ಕಾರ್ಯಕ್ಕೆ ಕೈ ಜೋಡಿಸಲು ಕೆಕೆಆರ್‍ಡಿಬಿ ಸದಾ ಸಿದ್ದವಿದೆ ಎಂದರು.
ಮುಂದುವರೆದು ಮಾತನಾಡಿದ ಅವರು, ಆರೋಗ್ಯಕರ ಸಮಾಜ ನಿರ್ಮಿಸುವಲ್ಲಿ ಸ್ಕೌಟ್ಸ್ ಗೈಡ್‍ನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ ಎಂದ ಅವರು, ವಿದ್ಯಾರ್ಥಿಗಲಲ್ಲಿ ದೆಶಪ್ರೇಮ ಹುಟ್ಟಿಸುವ, ಪ್ರಕೃತಿ ಬಗ್ಗೆ ಕಾಳಜಿ, ಉತ್ತಮ ಪ್ರಜೆಯಾಗಿ ಹೊರಹೊಮ್ಮಲು ಬೇಕಿರುವ ಗುಣಗಳು ಬಿತ್ತಬೇಕೆಂದು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ ಸೇರ್ಪಡೆಯಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಜೊತೆಗೆ ಕಲಿಕೆಯಲ್ಲೂ ಪ್ರಗತಿ ಸಧಿಸಲು ಸಾಧ್ಯವಿದೆ. ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳು ಸ್ಕೌಟ್ಸ್ ಗೈಡ್ಸ್‍ಗೆ ಸೇರ್ಪಡೆಯಾಗಬೇಕೆಂದರು.
ಭಾರತ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಮುಖ್ಯ ಆಯುಕ್ತೆ ಡಾ. ಗುರಮ್ಮಾ ಸಿದ್ದಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರೇರಣೆ ಎಂದರೆ ಮಕ್ಕಳಿಗೆ ಒಂದು ಶಕ್ತಿ ಮತ್ತು ಭರವಸೆ ಇದ್ದಂತೆ. ಇಲ್ಲಿ ತರಬೇತಿ ಪಡೆದರೆ ಜೀವನದಲ್ಲಿ ಶಿಸ್ತು, ಸಂಯಮ ಮತ್ತು ತಾಳ್ಮೆ, ದೇಶಭಕ್ತಿ ಮೂಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೀವನದಲ್ಲಿ ನಾನೂ ಕೂಡಾ ಏನಾದರೂ ಸಾಧಿಸಬಲ್ಲೆ ಎನ್ನುವ ಆತ್ಮವಿಸ್ವಾಸ ಇದರಿಂದ ಮೂಡುತ್ತದೆ ಎಂದರು.
ಇದೇ ವೇಳೆ ಭಾರತ ಸ್ಕೌಟ್ಸ್ ಮತ್ತು ಗೈಡ್ ರಾಜ್ಯ ಮುಖ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ, ರಾಜ್ಯ ಗೈಡ್ ಆಯುಕ್ತೆ ಗೀತಾ ನಟರಾಜನ್ ಮಾತನಾಡಿದರು. ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು, ಸಾನಿಧ್ಯ ವಹಿಸಿದ್ದರು.
ಸ್ಕೌಟ್ಸ್ ಕಲ್ಯಾಣ ಕರ್ನಟಕ ಉಸ್ತುವಾರಿ ಸಿ.ಬಿ ಪಾಟೀಲ ಓಕಳಿ, ಡಿಡಿಪಿಯು ಚಂದ್ರಕಂತ ಶಹಾಬಾದಕರ್, ಗೈಡ್ ಜಿಲ್ಲಾ ಆಯುಕ್ತೆ ಲೀಲಾವತಿ ಚಾಕೊತೆ, ಸಂಘಟನಾ ಆಯುಕ್ತ ರಮೆಶ ತಿಬಶೆಟ್ಟಿ, ಪ್ರಮುಖರಾದ ರಾಜೇಶ್ವರಿ ಭಾಲ್ಕೆ, ಜೈಶೀಲಾ ಸುದರ್ಶನ್, ಅನಿಲಕುಮಾರ ಶಾಸ್ತ್ರಿ ಹಾಗೂ ಇತರರು ಕಾರ್ಯಕ್ರಮದಲ್ಲಿದ್ದರು.
ಡಾ.ಹೆಚ್.ಬಿ ಭರಶೆಟ್ಟಿ ಸ್ವಾಗತಿಸಿ, ಮಲ್ಲೇಶ್ವರಿ ಜುಜಾರೆ ಕಾರ್ಯಕ್ರಮ ನಿರೂಪಿಸಿ, ಶ್ರೀನಿವಾಸ ಬಿರಾದಾರ ವಂದಿಸಿದರು.