ರಾಜ್ಯ  ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರಕ್ಕೆ ಖಂಡನೆ
ಸಂಜೆವಾಣಿ ವಾರ್ತೆ
ಹರಪನಹಳ್ಳಿ:ಅ,5- ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ-ಜೆಡಿಎಸ್ ಹುನ್ನಾರ ನಡೆಸಿವೆ, ಇದರಿಂದ ಸಿದ್ದರಾಮಯ್ಯನವರಿಗೆ ತೊಂದರೆ ಉಂಟಾದರೆ ರಾಜ್ಯದಲ್ಲಿ ರಕ್ತಪಾತವಾಗುತ್ತದೆ ಎಂದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂಡ ಸೈಟು ಹಂಚಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರವಿಲ್ಲದಿದ್ದರೂ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಸಿಎಂ ಸ್ಥಾನದಿಂದ ಕೆಳಗಿಳಿಸುವ ಷಡ್ಯಂತ್ರ ರೂಪಿಸಲಾಗಿದೆ ಎಂದು ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯನವರು ಕಳೆದ 40 ವರ್ಷದಿಂದ ತಮ್ಮ ರಾಜಕೀಯ ಜೀವನದಲ್ಲಿ ಯಾವುದೆ ಕಪ್ಪು-ಚುಕ್ಕೆ ಇಲ್ಲದೇ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ ಇದನ್ನು ಸಹಿಸಿಕೊಳ್ಳಲಾಗದವರು ಅವರನ್ನು ಕೆಳಗಿಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಅವರ ಪ್ರಯತ್ನ ಸಫಲವಾಗುದು ಎಂದು ದೂರಿದರು.
ರಾಜ್ಯದ ಜನತೆಯ ಆಶೀರ್ವಾದಿಂದ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆ ಇಂತಹ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರದ ಬಿಜೆಪಿ ನಾಯಕರು ರಾಜ್ಯಪಾಲರ ಮೂಲಕ ಒತ್ತಡ ಹೇರುತ್ತಿದ್ದಾರೆ, ಇದು ಹೀಗೆ ಮುಂದುವರೆದರೆ ಕೇಂದ್ರ ಬಿಜೆಪಿ ನಾಯಕರ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ, ವಕೀಲ ಗೋಣಿಬಸಪ್ಪ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಜೀವನದಲ್ಲಿ ಒಂದು ಕಪ್ಪು-ಚುಕ್ಕೆ ಇಲ್ಲದೇ ಪಾರದರ್ಶಕವಾಗಿ ಆಡಳಿತ ನಡೆಸಿಕೊಂಡು ಬಂದಿದ್ದಾರೆ, ಇವರ ಮೇಲೆ ಕೇಳಿ ಬಂದಿರುವ ಆರೋಪ ಸತ್ಯಕ್ಕೆ ದೂರವಾಗಿದೆ, ಇವರನ್ನು ಕೆಳಗಿಳಿಸುವ ಪ್ರಯತ್ನಕ್ಕೆ ಕೈ ಹಾಕಿದರೆ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಹೇಳಿದರು.
ಮುಖಂಡ ಟಿ.ವೇಂಕಟೇಶ ಮಾತನಾಡಿ ಬಿಜೆಪಿ-ಜೆಡಿಎಸ್ ಪಕ್ಷದ ನಾಯಕರು ರಾಜಕೀಯ ದುರುದ್ದೇಶದಿಂದ ಸಿದ್ದರಾಮಯ್ಯನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ, ಸಿದ್ದರಾಮಯ್ಯ ಯಾವತ್ತು ಕಾನೂನು ಬಾಹಿರವಾಗಿ ನಡೆದುಕೊಂಡಿಲ್ಲ ಕಾನೂನು ರೀತಿಯಲ್ಲಿ ಮೂಡದಲ್ಲಿ ನಿವೇಶನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ಚಿಗಟೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಬೇರಪ್ಪ ಮಾತನಾಡಿ ವಿರೋಧ ಪಕ್ಷದ ನಾಯಕರತು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ, ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಮುಂದಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಪುರಸಭಾ ಸದಸ್ಯ ಅಬ್ದುಲ್ ರೆಹಮಾನ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರ ಬಲಾಢ್ಯವಾಗಿದೆ ಇದನ್ನು ಕೆಡವಲು ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಗೊಂಗಡಿ ನಾಗರಾಜ, ಉದ್ದಾರ ಗಣೇಶ, ಲಾಟಿ ದಾದಪೀರ, ಚಿಕ್ಕೇರಿ ಬಸಪ್ಪ, ಮುಖಂಡರಾದ ಉಪ್ಪಾರ ಹನುಮಂತಪ್ಪ, ವಸಂತಪ್ಪ, ಜಾವೀದ್, ಹುಲಿಕಟ್ಟಿ, ಚಂದ್ರಪ್ಪ, ಮೈದೂರು ರಾಮಣ್ಣ, ನೀಲಗುಂದ ವಾಗೀಶ, ಟಿ.ಎಚ್.ಎಂ.ಮಂಜುನಾಥ್, ಓ.ಮಹಾಂತೇಶ, ಬಸವರಾಜ ಹುಲಿಯಪ್ಪನವರ್, ಅರವಿಂದ, ಮುಜುಬರ್, ಶಶಿಕುಮಾರ, ವೀರೇಶ, ದೇವೇಂದ್ರಗೌಡ, ಅಂಜಿನಪ್ಪ, ಶಿವರಾಜ ಸೇರಿದಂತೆ ಇತರರು ಇದ್ದರು.