ಅಭಿನಂದನಾ ಕಾರ್ಯಕ್ರಮ
ಧಾರವಾಡ, ಆ೫: ಸರಕಾರಿ ನೌಕರರು ಇಂದು ಬಹಳಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು ೨.೬೬ ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನೌಕರರ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕೆಂದು ವಿಧಾನ ಪರಿಷತ್ತ ಸಭಾಪತಿ ಬಸವರಾಜ ಹೊರಟ್ಟಿ ಅವರು ತಿಳಿಸಿದರು. ಅವರು ಧಾರವಾಡ ನಗರದ ಗೌರಮ್ಮ ಹಿರೇಮಠ (ರಪಾಟಿ) ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಧಾರವಾಡ ಜಿಲ್ಲಾ ಘಟಕ ಆಯೋಜಿಸಿದ್ದ ೨೦೨೩-೨೪ ನೇ ಸಾಲಿನ ಪ್ರತಿಭಾ ಪುರಸ್ಕಾರ, ಸರ್ವ ಸದಸ್ಯರ ಸಾಮಾನ್ಯ ಸಭೆ ಮತ್ತು ೭ನೇ ವೇತನ ಆಯೋಗ ಜಾರಿಗೆ ಸಹಕರಿಸಿದ ಶಾಸಕರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.
ಸರಕಾರಿ ನೌಕರನು ಸರಕಾರ ಮತ್ತು ಸಾರ್ವಜನಿಕರ ಮಧ್ಯದ ಕೊಂಡಿಯಾಗಿ ಕೆಲಸ ಮಾಡುತ್ತಾನೆ. ಸರಕಾರದ ವರ್ಚಸ್ಸು ನೌಕರನ ಕಾರ್ಯಕ್ಷಮತೆ ಮೇಲೆ ನಿಂತಿರುತ್ತದೆ. ಪ್ರತಿಯೊಬ್ಬ ಸರಕಾರಿ ನೌಕರ ಸರಕಾರದ ರಾಯಬಾರಿಯಂತೆ ಕರ್ತವ್ಯ ನಿರ್ವಹಿಸಿ, ಸರಕಾರದ ಬಗ್ಗೆ ಸದಭಿಪ್ರಾಯ ಮೂಡಿಸುತ್ತಾನೆ ಎಂದು ಅವರು ಹೇಳಿದರು. ಸರಕಾರಿ ನೌಕರರು ಬರೀ ಸಂಘ, ಸಂಸ್ಥೆಗಳ ಸದಸ್ಯತ್ವಕ್ಕೆ, ಸಂಘಟನೆಗೆ ಸೀಮಿತರಾಗಬಾರದು. ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ತಮ್ಮ ಸಾಮಾಜಿಕ ಋಣ ತೀರಿಸಬೇಕೆಂದು ಅವರು ತಿಳಿಸಿದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಸರಕಾರ ನಡೆಸುವಲ್ಲಿ ಸರಕಾರಿ ನೌಕರರ ಪಾತ್ರ ಮುಖ್ಯವಾಗಿದೆ. ಸರಕಾರಕ್ಕೆ ಆದಾಯ ತರುವಲ್ಲಿ ಅಧಿಕಾರಿಗಳು ಶ್ರಮಿಸುತ್ತಾರೆ ಎಂದು ಅವರು ಹೇಳಿದರು. ರಾಜ್ಯ ಸರಕಾರ ನಮ್ಮ, ೭ನೇ ವೇತನ ಆಯೋಗದ ಬೇಡಿಕೆಯನ್ನು ಈಡೇರಿಸಿದೆ. ಎನ್.ಪಿ.ಎಸ್ ಅನ್ನು ಒಪಿಎಸ್ ಮಾಡುವ ಕೆಲಸ ಸರಕಾರದ ಹಂತದಲ್ಲಿ ನಡೆದಿದೆ. ಸರಕಾರಿ ನೌಕರರಿಗೆ ನಗದು ರಹಿತ ಆರೋಗ್ಯ ಚಿಕಿತ್ಸೆ ನೀಡುವ ಆರೋಗ್ಯ ಸಂಜೀವಿನಿ ಯೋಜನೆ ಅನುಷ್ಠಾನವೂ ಪ್ರಗತಿಯಲ್ಲಿದೆ ಎಂದು ಷಡಾಕ್ಷರಿ ತಿಳಿಸಿದರು.
ರಾಜ್ಯ ಸರಕಾರಿ ನೌಕರ ಸಂಘವು ನೌಕರರ ಅನೇಕ ಬೇಡಿಕೆಗಳನ್ನು ಈಡೆರಿಸಿದೆ. ಜಂಟಿ ಸಮಾಲೋಚನಾ ಸಭೆಗಳ ಮೂಲಕ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನೌಕರರ ಸಮಸ್ಯೆಗಳ ಕುರಿತು ಇಲಾಖಾ ಮುಖ್ಯಸ್ಥರು, ಜಿಲ್ಲಾ ಹಾಗೂ ತಾಲೂಕು ಮುಖ್ಯಸ್ಥರೊಂದಿಗೆ ಚರ್ಚಿಸಿ, ಸಾಕಷ್ಟು ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಅವರು ತಿಳಿಸಿದರು.
ಅತಿಥಿಗಳಾಗಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ, ವೈಶುದೀಪ ಪೌಂಡೇಶನ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಪರವಾಗಿ ಎಸ್.ಎಸ್.ಎಲ್.ಸಿ ಯ ೭೦ ಮತ್ತು ಪಿಯುಸಿ ಯ ೯೦ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ವಹಿಸಿದ್ದರು. ರಮೇಶ ಲಿಂಗದಾಳ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಯಡಳ್ಳಿ ಸ್ವಾಗತಿಸಿದರು. ರಾಜಶೇಖರ ಬಾಣದ ವರದಿ ವಾಚನ ಮಾಡಿದರು. ಮಲ್ಲಿಕಾರ್ಜುನ ಸೊಲಗಿ ವಂದಿಸಿದರು.