ಹೊರಗುತ್ತಿಗೆ ಕಾರ್ಮಿಕರ ವೇತನ ಬಿಡುಗಡೆಗೆ ಆಗ್ರಹ; ಎಐಯುಟಿಯುಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೫: ಜಿಲ್ಲೆಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಕಾರ್ಮಿಕರಿಗೆ 4 ತಿಂಗಳ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಎಐಯುಟಿಯುಸಿ ಸಂಯೋಜಿತ ಯುವಜನ ಮತ್ತು ಕ್ರೀಡಾ ಇಲಾಖೆಯ ಕಾರ್ಮಿಕರ ಫೆಡರೇಶನ್ ಪ್ರತಿಭಟನೆ ನಡೆಸಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ ನಂತರ ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಅಣಬೇರು ತಿಪ್ಪೇಸ್ವಾಮಿ ಮಾತನಾಡಿ ಬಾಕಿ ಇರುವ 4 ತಿಂಗಳ ವೇತನವನ್ನು ಕೂಡಲೇ ನೀಡಬೇಕು. ಕಾರ್ಮಿಕರಿಗೆ ಪ್ರತಿ ತಿಂಗಳು 5ನೇ ತಾರೀಖಿನೋಳಿಗೆ ವೇತನ ಪಾವತಿಸಬೇಕು. ಕಾರ್ಮಿಕರಿಗೆ ವಾರದ ರಜೆ, ತಿಂಗಳ ರಜೆ ಮತ್ತು ರಾಷ್ಟ್ರೀಯ ಹಬ್ಬಗಳ ರಜೆಯನ್ನು ನೀಡಬೇಕು. ಇದಲ್ಲದೆ  ಇಲ್ಲಿಯವರೆಗೂ ರಜಾ ದಿನಗಳಲ್ಲಿ ಕೆಲಸ ಮಾಡಿ ಕೊಂಡಿರುವುದಕ್ಕೆ ಎರಡರಷ್ಟು ತುಟಿಭತ್ಯೆ ರೂಪದಲ್ಲಿ ವೇತನ ನೀಡಬೇಕು ಎಂದು ಆಗ್ರಹಿಸಿದರು.ಭದ್ರತಾ ಸಿಬ್ಬಂದಿಗಳಿಗೆ ಕೆಲಸದ ಅವಧಿ 8 ಗಂಟೆಗಳಿಗೆ ನಿಗದಿಗೊಳಿಸಬೇಕು ಮತ್ತು ಇಲ್ಲಿಯವರೆಗೂ ಹೆಚ್ಚುವರಿ ಅವಧಿಯ 2ಪಟ್ಟು ವೇತನ ಕೊಡಿಸಿಕೊಡಬೇಕು. ಸಮವಸ್ತ್ರ ಮತ್ತು ಗುರುತಿನ ಚೀಟಿ ನೀಡಬೇಕು. ಪ್ರತಿ ತಿಂಗಳು ವೇತನ ಚೀಟಿ ನೀಡಬೇಕು. ನೇಮಕಾತಿ ದಿನದಿಂದ ಇಲ್ಲಿಯವರೆಗೂ ವೇತನ, ಇ.ಪಿ.ಎಫ್ ಮತ್ತು ಇ.ಎಸ್.ಐ ಹಣವನ್ನು ಪಾವತಿಸಿರುವ ಬಗ್ಗೆ ದಾಖಲೆ ನೀಡಬೇಕು ಎಂದು ಒತ್ತಾಯಿಸಿದರು.ಕರ್ನಾಟಕ ರಾಜ್ಯ ಸರ್ಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಡೆಸಲ್ಪಡುತ್ತಿರುವ ಕ್ರೀಡಾಂಗಣಗಳು, ಕ್ರೀಡಾ ವಸತಿ ನಿಲಯಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹೊರಗುತ್ತಿಗೆ ಬಿಕೆಆರ್ ಸ್ವಾಮಿ ಏಜನ್ಸಿ ಮೂಲಕ ಸುಮಾರು 25 ಕ್ಕೂ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಈ ಕಾರ್ಮಿಕರಿಗೆ 5 ತಿಂಗಳುಗಳಿಂದ ಬಾಕಿ ಇರುವ ವೇತನ, ಭದ್ರತಾ ಸಿಬ್ಬಂದಿಗಳಿಗೆ ಕನಿಷ್ಠ 8 ಗಂಟೆಗಳ ಕಾಲ ಕೆಲಸ,ವೇತನ ಚೀಟಿ, ಇಪಿಎಪ್ ಮತ್ತಿತರ ಸೌಲಭ್ಯಗಳನ್ನು ಕೊಡಿಸಿ ಕೊಡಬೇಕೆಂದು ಹಲವಾರು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ  ಜಿಲ್ಲಾ ಸಂಚಾಲಕ ಮಂಜುನಾಥ್ ಕೈದಾಳೆ, ಜಿಲ್ಲಾಧ್ಯಕ್ಷ ಮಂಜುನಾಥ್ ಕುಕ್ಕುವಾಡ, ಕಾರ್ಮಿಕರಾದ ಗದಿಗೆಪ್ಪ, ಮುರುಗೇಶಿ, ನರಸಿಂಹ ಮೂರ್ತಿ, ಚನ್ನಬಸವರಾಜ, ಜಯ್ಯಮ್ಮ, ಅಂಜಿನಿ, ಸುಬ್ಬಣ್ಣ, ಬಲರಾಮ ಅರಸು ಹೊನ್ನಾಳಿ, ನರಸಿಂಹಪ್ಪ, ಚನ್ನಪ್ಪ, ನವೀನ್, ಹರೀಶ್, ಮಹಾಂತೇಶ್ ಹರಿಹರ ಇತರರು ಇದ್ದರು.