ಶುದ್ಧೀಕರಣಗೊಳ್ಳದ ಕುಡಿಯುವ ನೀರು ಪೂರೈಕೆ
ಗುಳೇದಗುಡ್ಡ,ಆ೫: ಪಟ್ಟಣಕ್ಕೆ ಆಲಮಟ್ಟಿ ಜಲಾಶಯದಿಂದ ಕುಡಿಯುವ ನೀರು ಶುದ್ಧೀಕರಣ ಘಟಕದ ಫಿಲ್ಟ್ರ್ ಕೆಟ್ಟು ತಿಂಗಳುಗಳೇ ಆಗಿದ್ದು ಇದರಿಂದ ಕುಡಿಯುವ ನೀರು ಶುದ್ಧೀಕರಣಗೊಳ್ಳದೇ ಪಟ್ಟಣಕ್ಕೆ ಸರಬರಾಜಾಗುತ್ತಿದೆ. ಇಂತಹ ನೀರನ್ನು ಕುಡಿಯುವುದರಿಂದ ವಾಂತಿಬೇಧಿ, ಹೊಟ್ಟೆನೋವು ಮುಂತಾದ ಕಾಯಿಲೆಗಳು ಬರುತ್ತಿವೆ ಎಂದು ಕರವೇ ತಾಲೂಕು ಅಧ್ಯಕ್ಷ ರವಿ ಅಂಗಡಿ ಆರೋಪಿಸಿದರು.
ಅವರು ಪಟ್ಟಣದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ, ಈಗ ಪೂರೈಕೆಯಾಗುತ್ತಿರುವ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಇಂತಹ ಅಯೋಗ್ಯ ನೀರನ್ನು ಪುರಸಭೆಯವರು ಸಾರ್ವಜನಿಕರಿಗೆ ಸರಬರಾಜು ಮಾಡುತ್ತಿದ್ದಾರೆ. ಕೂಡಲೇ ಪಟ್ಟಣದ ಜನತೆಗೆ ಶುದ್ಧಕುಡಿಯುವ ನೀರು ಪೂರೈಸಬೇಕು. ಇಲ್ಲವಾದಲ್ಲಿ ಕರವೇ ವತಿಯಿಂದ ಸಾರ್ವಜನಿಕರೊಂದಿಗೆ ಉಗ್ರ ಪತ್ರಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಪಟ್ಟಣದಲ್ಲಿ ಕುಡಿಯುವ ನೀರು ಸಾಕಷ್ಟು ಪೋಲಾಗಿ ರಸ್ತೆಗೆ ಜನರು ಹರಿದುಬಿಡುತ್ತಿದ್ದಾರೆ. ಇದರಿಂದ ಮಲೀನ ನೀರಿನಲ್ಲೇ ಜನರು ಸಂಚರಿಸುತ್ತಿದ್ದಾರೆ. ರಸ್ತೆಗಳು ಹಾಳಾಗಿದ್ದು, ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಗೊಂಡು ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇನ್ನು ಹಂದಿ ಹಾಗೂ ಬೀಡಾಡಿ ದನಗಳು ಹಾವಳಿ ಹೆಚ್ಚಾಗಿವೆ. ಆದರೂ ಪುರಸಭೆ ಅಧಿಕಾರಿಗಳು ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಕರವೇಯ ಶ್ರೀಕಾಂತ ಹುನಗುಂದ ನಿಂಗಪ್ಪ ಯಣ್ಣಿ, ಸೋಮಶೇಖರ ಕಲ್ಬುರ್ಗಿ, ವಿಜಯ ಕವಿಶೆಟ್ಟಿ, ಮಹಾಂತೇಶ ತಿಪ್ಪಾ, ಆನಂದ ತಿಪ್ಪಾಗೌಡ್ರ, ಮಲ್ಲಿಕಾರ್ಜುನ ಮೆಂತೆದ ಇದ್ದರು.